ಈ ಕಷ್ಟದ ಸಮಯದಲ್ಲಿ ನನ್ನ ಜನ್ಮದಿನ ಆಚರಣೆ ಬೇಡ; ಎಚ್‌ಡಿಕೆ ಮನವಿ

ಈ ಕಷ್ಟದ ಸಮಯದಲ್ಲಿ ನನ್ನ ಜನ್ಮದಿನ ಆಚರಣೆ ಬೇಡ; ಎಚ್‌ಡಿಕೆ ಮನವಿ

ಬೆಂಗಳೂರು, ಡಿಸೆಂಬರ್ 15: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ಹಿತೈಷಿಗಳಲ್ಲಿ ಕಳಕಳಿಯ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಟ್ವಿಟರ್ ಮೂಲಕ ಮನವಿ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, "ಇದೇ ಡಿ.16ರಂದು ನನ್ನ ಜನ್ಮದಿನ.

ಈ ದಿನಕ್ಕಾಗಿ ನಿಮ್ಮಲ್ಲಿರುವ ಪ್ರೀತಿಯ ಕಾತರವನ್ನು ನಾನು ಬಲ್ಲೆ. ಕಳೆದೆರಡು ವರ್ಷಗಳಿಂದ ಕೋವಿಡ್-19 ಕಾರಣಕ್ಕೆ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ. ಸಾವು- ನೋವು ಕಂಡಿದ್ದೇವೆ. ಅಕಾಲಿಕ ಮಳೆ- ನೆರೆ ವಿಕೋಪಗಳಿಂದ ತತ್ತರಿಸಿದ್ದೇವೆ. ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ," ಎಂದು ಹೇಳಿದ್ದಾರೆ.

"ಈ ಕಷ್ಟದ ಸಮಯದಲ್ಲಿ ಅದ್ಧೂರಿ ಜನ್ಮದಿನ ಆಚರಣೆ ಮಾಡುವುದು ನನ್ನ ಮನಸ್ಸಿಗೆ ಒಪ್ಪುವ ವಿಚಾರವಲ್ಲ. ಹಾರ ತುರಾಯಿ ಹಾಕಿ, ಕೇಕ್ ಕತ್ತರಿಸಿ ವಿಜೃಂಭಣೆ ಮಾಡುವುದು ಬೇಡ. ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ ಹಾಗೂ ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿ," ಎಂದು ವಿನಂತಿಸಿದ್ದಾರೆ.

"ಹೀಗೆ ನನ್ನ ಜನ್ಮದಿನಕ್ಕೆ ಸಾರ್ಥಕತೆ ತನ್ನಿ. ಅದ್ಧೂರಿ ಹುಟ್ಟುಹಬ್ಬ ನನಗೆ ಸುತರಾಂ ಇಷ್ಟವಿಲ್ಲ. ಆ ಅದ್ಧೂರಿತನದಲ್ಲಿ ಕಂಗೆಟ್ಟಿರುವ ಜನರನ್ನು ಅಣಕಿಸುವುದು ಬೇಡ. ನೀವೆಲ್ಲರೂ ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ. ಹೊಸ ಚೈತನ್ಯ ಮತ್ತು ಧೃಡ ಸಂಕಲ್ಪದೊಂದಿಗೆ, ಪಕ್ಷವನ್ನು ಕಟ್ಟೋಣ. ಸವಾಲುಗಳನ್ನು ಮೆಟ್ಟಿ ನಿಲ್ಲೋಣವೆಂದು," ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದೆ. ಜೆಡಿಎಸ್ ಪಕ್ಷ ಸ್ಪರ್ಧಿಸಿದ್ದ ಆರು ಕ್ಷೇತ್ರಗಳಲ್ಲಿ ಇಬ್ಬರು ಮಾತ್ರ ಗೆದ್ದಿದ್ದಾರೆ. ಹಾಸನ ಮತ್ತು ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಿಸಿದ್ದರೆ, ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುಗ್ಗರಿಸಿದ್ದಾರೆ.

ಈ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. "ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ,'' ಎಂದು ಪರಿಷತ್ ಚುನಾವಣೆಯ ಸೋಲನ್ನು ಒಪ್ಪಿಕೊಂಡರು.

ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದ ಎಚ್‌ಡಿಕೆ, ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಆದರೂ ಈ ಚುನಾವಣೆಯಲ್ಲಿ ಪ್ರಯತ್ನ ಮಾಡಿದ್ದೇವೆ. ʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ, ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

"ಚುನಾವಣೆ ಎಂದರೆ ಸೋಲು- ಗೆಲುವು. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್ ಎಂದೂ ಧೃತಿಗೆಡುವುದಿಲ್ಲ,'' ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಹಾಸನ ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ಜೆಡಿಎಸ್ ಮತ್ತೆ ಪ್ರಾಬಲ್ಯ ಸಾಧಿಸಿದೆ. ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿಗೆ 2247 ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ 724 ಮತಗಳು ಮತ್ತು ಬಿಜೆಪಿ ಅಭ್ಯರ್ಥಿಗೆ 435 ಮತಗಳು ಲಭಿಸಿವೆ. ಡಾ. ಸೂರಜ್ ರೇವಣ್ಣ 1523 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಮೈಸೂರು- ಚಾಮರಾಜನಗರ ಕ್ಷೇತ್ರದ ಫಲಿತಾಂಶದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಲು ವಿಫಲರಾದ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತು. ಕೊನೆ ಹಂತದವರೆಗೂ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಗೆಲುವಿನತ್ತ ದಾಪುಗಾಲಿಟ್ಟಿದ್ದರು.

ಆದರೆ ಅಂತಿಮವಾಗಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ವ್ಯಾಲ್ಯೂ ಫಿಕ್ಸ್ ಮಾಡಿದಾಗ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡರು 42 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೊನೆ ಕ್ಷಣದಲ್ಲಿ ಎದುರಾದ ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು‌ ಸಾಧಿಸುವ ಮೂಲಕ ಬಿಜೆಪಿ ಗೆಲುವಿನ ಆಸೆಗೆ ತಣ್ಣೀರೆರಚಿದರು.