ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ: ರಾಷ್ಟ್ರಪತಿಯಾದ ಬಳಿಕ ಮೊದಲ ಬಾರಿಗೆ ʻದ್ರೌಪದಿ ಮುರ್ಮುʼ ಭಾಷಣ

ನವದೆಹಲಿ: ಸಂಸತ್ತಿನ ಎರಡು ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಇಂದು (ಮಂಗಳವಾರ) ಆರಂಭವಾಗಲಿದೆ. ರಾಷ್ಟ್ರಪತಿ ಭಾಷಣದ ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.
ಬುಧವಾರದ ಕೇಂದ್ರ ಬಜೆಟ್‌ಗೂ ಮುನ್ನ ಇಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯೂ ಮಂಡನೆಯಾಗಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡುವ ಮೊದಲ ಭಾಷಣ ಇದಾಗಿದೆ. ಕಳೆದ ವರ್ಷ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದರು.
ಇಂದು ರಾಷ್ಟ್ರಪತಿಗಳ ಭಾಷಣ ಮುಗಿದ ಅರ್ಧ ಗಂಟೆಯ ನಂತರ ಸರ್ಕಾರಿ ವ್ಯವಹಾರಗಳ ವಹಿವಾಟಿಗಾಗಿ ರಾಜ್ಯಸಭೆಯ ಪ್ರತ್ಯೇಕ ಅಧಿವೇಶನ ಇರುತ್ತದೆ. ನಾಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದ್ದು, ಮೊದಲ ಭಾಗವು ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಎರಡನೇ ಭಾಗವು ಮಾರ್ಚ್ 13 ರಿಂದ ನಡೆಯಲಿದ್ದು, ಏಪ್ರಿಲ್ 6 ರಂದು ಮುಕ್ತಾಯಗೊಳ್ಳಲಿದೆ.