ಆಸ್ಪತ್ರೆಯಲ್ಲಿ ರೌಂಡ್ಸ್ನಲ್ಲಿದ್ದಾಗಲೇ ಡಾಕ್ಟರ್ಗೆ ಹೃದಯಾಘಾತ; ಕುಸಿದುಬಿದ್ದು 30 ವರ್ಷದ ವೈದ್ಯರ ಸಾವು
ನವದೆಹಲಿ: ಇಪ್ಪತ್ಮೂರು ವರ್ಷದ ವ್ಯಕ್ತಿ ಮೆಡಿಕಲ್ ಶಾಪ್ನಲ್ಲಿ ಔಷಧ ಪಡೆಯುವಾಗಲೇ ಹೃದಯಾಘಾತಕ್ಕೀಡಾದ ವಿಡಿಯೋ ವೈರಲ್ ಆದ ಬೆನ್ನಿಗೇ ವೈದ್ಯರೊಬ್ಬರು ರೌಂಡ್ಸ್ನಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಪ್ರಕರಣವೊಂದು ಬೆಳಕಿಗೆ ಬಂದಿದೆ
ದೆಹಲಿಯ ಡಾ.ರಾಮ್ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಡಾ.ಸಾಹಿಲ್ ಮಷಾಲ್ (30) ಸಾವಿಗೀಡಾದ ವ್ಯಕ್ತಿ. ಲೋಹಿಯಾ ಆಸ್ಪತ್ರೆಯ ಪೀಡಿಯಾಟ್ರಿಕ್ ವಿಭಾಗದಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿರುವ ಸಾಹಿಲ್ ಬುಧವಾರ ರೌಂಡ್ಸ್ನಲ್ಲಿ ಇದ್ದಾಗಲೇ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಶಸ್ತ್ರಚಿಕಿತ್ಸೆ ನಿಗದಿಯಾಗಿದ್ದ ಮಗುವನ್ನು ರೌಂಡ್ಸ್ ವೇಳೆ ಪರಿಶೀಲನೆ ಮಾಡುತ್ತಿದ್ದಾಗ ಡಾ.ಸಾಹಿಲ್ಗೆ ಎದೆನೋವು ಕಾಣಿಸಿಕೊಂಡಿತ್ತು. ಅದಾಗಿ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದರು. ಇತರ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಸಾಹಿಲ್ಗೆ ಹೃದಯದ ಸಮಸ್ಯೆಯ ಯಾವುದೇ ಹಿನ್ನೆಲೆಯೂ ಇರಲಿಲ್ಲ ಎಂದು ಸಹೋದ್ಯೋಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಪಠಾಣ್ಕೋಟ್ ಮೂಲದ ಈತ ಅಮೃತಸರದಲ್ಲಿ ಎಂಡಿ, ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, 2020ರಲ್ಲಿ ಲೋಹಿಯಾ ಆಸ್ಪತ್ರೆಯ ಉದ್ಯೋಗಿಯಾಗಿ ಸೇರಿಕೊಂಡಿದ್ದರು.