ಅಗ್ನಿವೀರರ ಮೊದಲ ತಂಡ ಸೇವೆಗೆ ಸಿದ್ಧ; 273 ಮಹಿಳೆಯರೂ ಸೇರಿ 2,600 ನೌಕಾ ಅಗ್ನಿವೀರರು

ಅಗ್ನಿವೀರರ ಮೊದಲ ತಂಡ ಸೇವೆಗೆ ಸಿದ್ಧ; 273 ಮಹಿಳೆಯರೂ ಸೇರಿ 2,600 ನೌಕಾ ಅಗ್ನಿವೀರರು

ವದೆಹಲಿ:ಭಾರತೀಯ ಸೇನೆಯ ಹಲವು ದಶಕಗಳಷ್ಟು ಹಳೆಯ ನೇಮಕಾತಿ ಪ್ರಕ್ರಿಯೆಗೆ ಅಂತ್ಯಹಾಡಿ, “ಅಗ್ನಿವೀರ’ ಯೋಜನೆಯನ್ನು ಘೋಷಿಸಿದ ಬಳಿಕ ದೇಶದ ಮೊತ್ತಮೊದಲ “ಅಗ್ನಿವೀರ’ರ ತಂಡ ಸೇವೆಗೆ ಸಿದ್ಧವಾಗಿದೆ.

ಒಡಿಶಾದ ಐಎನ್‌ಎಸ್‌ ಚಿಲ್ಕಾದಲ್ಲಿ 273 ಮಹಿಳೆಯರೂ ಸೇರಿದಂತೆ 2,600 ನೌಕಾ ಅಗ್ನಿವೀರರ ಮೊದಲ ತಂಡ ಸತತ 4 ತಿಂಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದೆ.

ಇದೇ 28ರಂದು ಅವರ “ಪಾಸಿಂಗ್‌ ಔಟ್‌ ಪರೇಡ್‌’ ನಡೆಯಲಿದೆ ಎಂದು ನೌಕಾಪಡೆ ತಿಳಿಸಿದೆ.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ಅವರು ಈ ಪರೇಡ್‌ನ‌ಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರರನ್ನು ನಿರ್ಗಮನ ಪಥಸಂಚಲನದ ಬಳಿಕ, ಸಾಗರ ತರಬೇತಿಗಾಗಿ ಮುಂಚೂಣಿ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುತ್ತದೆ. ಪಾಸಿಂಗ್‌ ಔಟ್‌ ಪರೇಡ್‌ ಅನ್ನು ಸಾಮಾನ್ಯವಾಗಿ ಹಗಲು ಹೊತ್ತಲ್ಲಿ ನಡೆಸಲಾಗುತ್ತದೆ. ಆದರೆ, ಈ ಬಾರಿ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಾ.28ರಂದು ಸೂರ್ಯಾಸ್ತದ ಬಳಿಕ ಪರೇಡ್‌ ನಡೆಸುತ್ತಿರುವುದು ವಿಶೇಷ.

ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರರು- 2,600
ಈ ಪೈಕಿ ಮಹಿಳೆಯರ ಸಂಖ್ಯೆ- 273
ತರಬೇತಿ ಆರಂಭವಾಗಿದ್ದು – ನವೆಂಬರ್‌ 2022
ಐಎನ್‌ಎಸ್‌ ಚಿಲ್ಕಾದಲ್ಲಿ ಎಷ್ಟು ವಾರಗಳ ತರಬೇತಿ?- 16
ಏನೇನು ತರಬೇತಿ?- ದೈಹಿಕ ತರಬೇತಿ, ಸ್ವಿಮ್ಮಿಂಗ್‌, ಸಣ್ಣ ಶಸ್ತ್ರಾಸ್ತ್ರಗಳು, ಸೈಬರ್‌ ಭದ್ರತೆ, ನೌಕಾಪಡೆ ಕೇಂದ್ರಿತ ತರಬೇತಿ ಇತ್ಯಾದಿ.