ಅಂಗವಿಕಲ ಸರ್ಕಾರಿ ನೌಕರರ ಮುಂಬಡ್ತಿಯಲ್ಲಿ ಶೇ.4 ಮೀಸಲು : ರಾಜ್ಯ ಸರ್ಕಾರ ಅದೇಶ

ಅಂಗವಿಕಲ ಸರ್ಕಾರಿ ನೌಕರರ ಮುಂಬಡ್ತಿಯಲ್ಲಿ ಶೇ.4 ಮೀಸಲು : ರಾಜ್ಯ ಸರ್ಕಾರ ಅದೇಶ

ಬೆಂಗಳೂರು: ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ( Government Employees ) ಗ್ರೂಪ್-ಡಿ, ಸಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್ ಡಿ ಮತ್ತು ಸಿ ವೃಂದಗಳಿಗೆ ಸೇರಿದ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗಿರುವುದಾಗಿ ಹೇಳಿದ್ದಾರೆ.

ಇನ್ನೂ ಮೀಸಲಾತಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದ್ದು, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2016ರ ಅಧಿನಿಯಮದ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಲಾದ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಆಸ್ಪದವು ಅನ್ವಯವಾಗುತ್ತದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಸಚಿವಾಲಯದ ಮಹಿಳೆಯರ ಮತ್ತು ಮಕ್ಕಳ ಅಭವೃದ್ಧಿ, ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು, ಅಂಗವೈಕಲ್ಯವನ್ನುಳ್ಳ ವ್ಯಕ್ತಿಗಳಿಂದ ಭರ್ತಿ ಮಾಡಬಹುದಾದ ಹುದ್ದೆಗಳನ್ನು ಗುರುತಿಸಿ ಹೊರಡಿಸಲಾದ ಅಧಿಸೂಚನೆಯಲ್ಲಿ ಒಳಗೊಂಡ ಹುದ್ದೆಗಳಿಗೆ ಮಾತ್ರ ಮುಂಬಡ್ತಿಯಲ್ಲಿ ಮೀಸಲಾತಿ ಅನ್ವಯವಾಗುತ್ತದೆ ಎಂದಿದ್ದಾರೆ.

ಮೀಸಲಾತಿ ಅಡಿಯಲ್ಲಿ ಮುಂಬಡ್ತಿ ಕೋರುವಂತ ಸರ್ಕಾರಿ ನೌಕರರು ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ, ಅಂಗವೈಕಲ್ಯವನ್ನುಳ್ಳ ಬಗ್ಗೆ ಪ್ರಮಾಣಪತ್ರವನ್ನು ಪಡೆದು, ಸಲ್ಲಿಸುವುದು. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರೂಪ್-ಸಿ ಮತ್ತು ಡಿ ಹುದ್ದೆಗಳಿಗೆ ನೇರ ನೇಮಕಾತಿಯ ಪ್ರಮಾಣವನ್ನು ನಿಗದಿಪಡಿಸಿದ್ದಲ್ಲಿ ಹಾಗೂ ಅಂತಹ ನೇರ ನೇಮಕಾತಿಯ ಪ್ರಮಾಣ ಶೇ.75ರನ್ನು ಮೀರದಿದ್ದಲ್ಲಿ, ಆ ವೃಂದದ ಹುದ್ದೆಗಳಿಗೆ ಈ ಮುಂಬಡ್ತಿ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.