ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ: ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?
ಬೆಂಗಳೂರು: ನಿಮ್ಮ ಸಮಸ್ಯೆ ಬಗ್ಗೆ ನಾನು ಅಧ್ಯಯನ ಮಾಡಿದ್ದು, ಇತ್ತೀಚೆಗೆ ಖರ್ಗೆ ಅವರು ನನ್ನನ್ನು, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಇತರ ಹಿರಿಯ ನಾಯಕರನ್ನು ಕರೆಸಿ ಚರ್ಚೆ ಮಾಡಿದ್ದರು. ಆಗ ನಿಮ್ಮ ವಿಚಾರ, ನಿಮ್ಮ ಹೋರಾಟ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿನ ತೀರ್ಮಾನದ ಬಗ್ಗೆ ಚರ್ಚೆ ಮಾಡಲಾಯಿತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಧರಂ ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಾನು, ಸಿದ್ದರಾಮಯ್ಯ ಹಾಗೂ ಖರ್ಗೆ ಸಾಹೇಬರು ಕಲಬುರ್ಗಿಗೆ ತೆರಳಬೇಕಿತ್ತು. ಆದರೆ ನಿನ್ನೆ ನಿಮ್ಮ ಸಂಘದ ಸದಸ್ಯರು ನನ್ನನ್ನು ಭೇಟಿ ಮಾಡಿ ಪ್ರತಿಭಟನೆ ನಡೆಯುತ್ತಿರುವ ಇಲ್ಲಿಗೆ ಆಗಮಿಸಬೇಕು ಎಂದು ಹೇಳಿದರು. ಅಧಿವೇಶನ ಹಿನ್ನೆಲೆಯಲ್ಲಿ ನಾಳೆ ನಾವು ಬೆಳಗಾವಿಗೆ ತೆರಳಬೇಕಿದೆ. ಹೀಗಾಗಿ ಇಂದು ಇಲ್ಲಿಗೆ ಬರುವುದಾಗಿ ಮಾತು ಕೊಟ್ಟು ಅದರಂತೆ ಬಂದಿದ್ದೇನೆ ಎಂದರು.
ಇದು ಬಸವಣ್ಣ, ಶಿಶುನಾಳ ಶರೀಫರು, ಕನಕದಾಸರು, ಕುವೆಂಪು ಅವರ ನಾಡು. ಇವರು ಕಂಡ ಕನಸಿನ ಕರ್ನಾಟಕಕ್ಕೆ ನೀವೆಲ್ಲರೂ ಶ್ರಮಿಸುತ್ತಿದ್ದೀರಿ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಸೇವೆ ಸಲ್ಲಿಸುತ್ತಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ನಾಲ್ಕು ಆಧಾರ ಸ್ತಂಭಗಳು. ಒಬ್ಬರನ್ನು ಒಬ್ಬರು ಗೌರವದಿಂದ ಕಂಡು ರಕ್ಷಣೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಎಸ್.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಇಲ್ಲಿದ್ದ ಜೈಲನ್ನು ಸ್ಥಳಾಂತರಿಸಿ, ಪ್ರತಿಭಟನಾಕಾರರಿಗೆ ಧ್ವನಿ ಎತ್ತಲು ಫ್ರೀಡಂ ಪಾರ್ಕ್ ಎಂದು ಹೆಸರಿಸಲಾಯಿತು ಎಂದು ತಿಳಿಸಿದರು.
ನಿಮ್ಮ ಅನೇಕ ಸ್ನೇಹಿತರು 2004 ರಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟ ನಿಮ್ಮ ಮೂಲ ಹಕ್ಕು. ಸರ್ಕಾರ ವ್ಯಾಪಾರಿಯ ದೃಷ್ಟಿಕೋನದಿಂದ ಪಿಂಚಣಿ ಯೋಜನೆಯನ್ನು ನೋಡುತ್ತಿದೆ. ಈ ಹಿಂದೆ ಸರ್ಕಾರ ಅನೇಕ ದೊಡ್ಡ ಕಂಪನಿಗಳನ್ನು ಆರಂಭಿಸಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟು, ಎಲ್ಲಾ ವಲಯಗಳಲ್ಲಿ ಸೋಪು, ಬಲ್ಬ್, ಕಾಗದ, ವಿಮೆ ಸೇರಿದಂತೆ ಕೈಗಾರಿಕೆ ಆರಂಭಿಸಿತು. ಈ ಸಮಯದಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಯಿತು ಎಂದರು.