ಸಿನಿಮಾ ನೋಡಲು ಅಲೆಮಾರಿ ಜನರನ್ನು ಒಳಗೆ ಬಿಡದ ಮಲ್ಟಿಫ್ಲೆಕ್ಸ್ ಸಿಬ್ಬಂದಿ: ವಿವಾದ
ಚೆನ್ನೈ: ಮಲ್ಟಿಫ್ಲೆಕ್ಸ್‌ಗೆ ಸಿನಿಮಾ ನೋಡಲು ಬಂದಿದ್ದ ಅಲೆಮಾರಿ ಜನಾಂಗದವರನ್ನು ಅಲ್ಲಿನ ಸಿಬ್ಬಂದಿ ತಡೆದಿರುವ ಘಟನೆ ತಮಿಳುನಾಡಿನಲ್ಲಿ ವಿವಾದವನ್ನುಂಟು ಮಾಡಿದೆ.
ಚೆನ್ನೈನ ಕೋಯಾಂಬೆಡು ಬಳಿಯ 'ರೋಹಿಣಿ ಸಿಲ್ವರ್ ಸ್ಕ್ರೀನ್ಸ್' ಎಂಬ ಮಲ್ಟಿಫ್ಲೆಕ್ಸ್‌ಗೆ 'ನಾರಿಕುರುವ' ಎಂಬ ಅಲೆಮಾರಿ ಜನಾಂಗದ ಮಹಿಳೆ, ಮಕ್ಕಳು ಸೇರಿ ಐದಾರು ಜನ ಸಿಲಂಬರಸನ್ ಅವರ 'ಪಾಠು ತಲಾ' ಸಿನಿಮಾ ನೋಡಲು ಗುರುವಾರ ಬೆಳಿಗ್ಗೆ ಬಂದಿದ್ದರು.
ಇವರೆಲ್ಲ ಟಿಕೆಟ್ ಖರೀದಿಸಿಯೇ ಸಿನಿಮಾ ನೋಡಲು ಬಂದಿದ್ದರು. ಆದರೆ, ತಪಾಸಣೆ ಗೇಟ್ ಬಳಿ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸಿಬ್ಬಂದಿ, ಅಲೆಮಾರಿ ಜನಾಂಗದವರನ್ನು ಚಿತ್ರಮಂದಿರದ ಒಳಗೆ ಹೋಗದಂತೆ ತಡೆಹಿಡಿದಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ಸುದ್ದಿ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ವಿವಾದವುಂಟಾಗಿ, ಅನೇಕರು ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಇದು ಅಮಾನವೀಯ' ನಡೆ ಎಂದು ಖಂಡಿಸಿದ್ದಾರೆ.