ಸಾರಿಗೆ ಸಂಸ್ಥೆಗಳ ಖಾಸಗೀಕರಣದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಶ್ರೀನಿವಾಸ ಪೂಜಾರಿ

ಬೆಳಗಾವಿ, ಡಿ.24- ಸಾರಿಗೆ ಸಂಸ್ಥೆಗಳ ಖಾಸಗೀಕರಣದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವರು ಆಗಿರುವ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‍ನಲ್ಲಿ ಹೇಳಿದ್ದಾರೆ.ಸದಸ್ಯ ಮುನಿರಾಜು ಅವರು ಪ್ರಶ್ನೆ ಕೇಳಿ, ಸಾರಿಗೆ ಸಂಸ್ಥೆಯಲ್ಲಿ ಹಳೆಯ ಬಸ್‍ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ, ಕೋವಿಡ್ ಸಂಕಷ್ಟ ಸಂದರ್ಭದಲ್ಲೂ ಬಿಎಂಟಿಸಿ 643 ಬಸ್‍ಗಳನ್ನು ಖರೀದಿಸಿದ್ದೇಕೆ ಎಂದು ಪ್ರಶ್ನಿಸಿದರು.
ಅದಕ್ಕೆ ಸಾರಿಗೆ ಸಚಿವರ ಪರವಾಗಿ ಉತ್ತರ ನೀಡಿದ ಸಭಾ ನಾಯಕರು, ಬಿಎಂಟಿಸಿ ಸಂಸ್ಥೆ ಒಟ್ಟು 733 ಕೋಟಿ ಸಾಲ ಪಡೆದಿದೆ. ಅದರಲ್ಲಿ 195 ಕೋಟಿ ರೂ. ಮರು ಪಾವತಿ ಮಾಡಿದೆ ಎಂದು ಹೇಳಿದರು.ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಸಂಸ್ಥೆಗಳ ಹಳೆಯ ಬಸ್ಗಳನ್ನು ನಿಯಮಾನುಸಾರ ಬದಲಾವಣೆ ಮಾಡಲಾಗುತ್ತಿದೆ.
ಅದರಲ್ಲಿ 800 ಲಕ್ಷ ಕಿ.ಮೀ ಓಡಿರುವ ಅಥವಾ 11 ವರ್ಷವಾದ ವಾಹನಗಳನ್ನು ಯಾವುದು ಮೋದಲೋ ಅದನ್ನು ಆಧರಿಸಿ ಬದಲಾವಣೆ ಮಾಡಲಾಗುವುದು. ವೋಲ್ವೋ ಬಸ್‍ಗಳು 10 ಲಕ್ಷ ಕಿ.ಮೀ. ಓಡಿದ ಬಳಿಕ ವಿಲೇವಾರಿ ಮಾಡಲಾಗುವುದು ಎಂದರು. ಬಿಎಂಟಿಸಿಯಲ್ಲಿ 600 ವೋಲೋ ಬಸ್‍ಗಳಿವೆ, ಅವುಗಳನ್ನು ಬದಲಾವಣೆ ಮಾಡುವ ಅಗತ್ಯ ಇದೆ. ಸದ್ಯಕ್ಕೆ ಹೊಸದಾಗಿ ವೋಲೋ ಬಸ್ ಗಳನ್ನು ಖರೀದಿಸಿಲ್ಲ. ಆದರೆ ನಿಯಮಾನುಸಾರ ಸಾಮಾನ್ಯ ಬಸ್‍ಗಳನ್ನು ಖರೀದಿ ಮಾಡಿದ್ದೇವೆ ಎಂದರು.
ಕಾರ್ಮಿಕರ, ಸಾರ್ವಜನಿಕರ ಹಿತ ದೃಷ್ಠಿಯಿಂದ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವುದಿಲ್ಲ. ಅಂತಹ ಯಾವ ಪ್ರಸ್ತಾವಗಳು ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.