ಸರ್ಕಾರದ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ : ಸರ್ಕಾರದ ಉಚಿತ ನಿವೇಶನ ಪಡೆಯಲು ನಿವೇಶನ ರಹಿತರು ಯಾವುದೇ ವ್ಯಕ್ತಿಗೆ, ಅಧಿಕಾರಿಗೆ ಒಂದು ನಯಾಪೈಸೆ ಲಂಚ ನೀಡಬಾರದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವೇಶನ ರಹಿತರ ಹಾಗೂ ವಸತಿ ರಹಿತರ ಆಯ್ಕೆ ಸಂಬಂಧ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿವೇಶನ ರಹಿತರು ಸರ್ಕಾರದ ಉಚಿತ ನಿವೇಶನ ಪಡೆಯಲು ಯಾವುದೇ ವ್ಯಕ್ತಿಗೆ ಒಂದು ನಯಾಪೈಸೆ ಲಂಚ ನೀಡಬಾರದು , ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿ ಮತ್ತು ಸಿಬ್ಬಂದಿಗೆ ಲಂಚ ಕೊಟ್ಟರೆ ತಮ್ಮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 100 ಮನೆಗಳ ಹಾಗೂ 252 ನಿವೇಶನಗಳ ಫಲಾನುಭವಿಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು. ನಿವೇಶನ ಮತ್ತು ವಸತಿ ರಹಿತ ಕಡು ಬಡ ಕುಟುಂಬಗಳಿಗೆ ಮಾತ್ರ ಪಾರದರ್ಶಕವಾಗಿ ಎಲ್ಲರ ಸಮ್ಮುಖದಲ್ಲಿಯೇ ಆಯ್ಕೆ ಗ್ರಾಮ ಸಭೆಯಲ್ಲಿ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕಿನ ಅಲಾಸ್ತಿಮ್ಮನಹಳ್ಳಿ ಗ್ರಾಮದಲ್ಲಿ ಇಂದು ಆಯೋಜಿಸಿದ್ದ ಶ್ರೀ ದೊಡ್ಡಮ್ಮ ದೇವಿಯ 39ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಸುಧಾಕರ್ ಭಾಗವಹಿಸಿ ದೇವಿಯ ದರ್ಶನ ಪಡೆದರು.