ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ: ತೋಂಟದ ಸಿದ್ಧರಾಮ ಸ್ವಾಮೀಜಿ

ಬೆಳಗಾವಿ: ಇನ್ನೂ ಆದರೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಹೊರಗೆ ಬರಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಲಿಂಗಾಯತ ಒಳಪಂಗಡದ ಜಾತಿಯವರು ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಹೋರಾಟ ಸೂಕ್ತ ಅಲ್ಲ. ಎಲ್ಲಾ ಒಂದು ಹಂತಕ್ಕೆ ಬಂದ ಬಳಿಕ ಮತ್ತೆ ಸೈದ್ಧಾಂತಿಕ, ಕಾನೂನಾತ್ಮಕವಾಗಿ ಪ್ರತಿಪಾದನೆ ಮಾಡಿ ಹೋರಾಟ ಮಾಡಲಾಗುತ್ತದೆ. ಜಾಗತಿಕ ಲಿಂಗಾಯತ ಮಹಾಸಭಾ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ ಎಂದರು.
ಲಿಂಗಾಯತ ಧರ್ಮದಲ್ಲಿ 108 ಒಳಜಾತಿಗಳಿವೆ. ಮೀಸಲಾತಿ ಕೇಳುವುದರಲ್ಲಿ ಯಾವುದೇ ತಪ್ಪು ಇಲ್ಲ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತದೆ. ಯಾವುದೇ ರಾಜಕೀಯ ಲಾಭಕ್ಕಾಗಿ ಧರ್ಮ ಬಳಿಸಿಕೊಳ್ಳಬಾರದು. ಅಧಿಕಾರ, ವೈಯಕ್ತಿಕ ಸ್ವಾರ್ಥಕ್ಕಾಗಿ ಎಂದಿಗೂ ಧರ್ಮವನ್ನು ಬಳಸಬಾರದು ಎಂದು ಹೇಳಿದ್ದಾರೆ.