ರಾಜಕೀಯಕ್ಕೆ ಸೈಲೆಂಟ್ ಸುನೀಲ ಎಂಟ್ರಿ; ಬಿಜೆಪಿಯಿಂದ ಟಿಕೆಟ್ ಸಾಧ್ಯತೆ!

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಸಮಯ ಹತ್ತಿರವಾಗುತ್ತಿದಂತೆ ಹೊಸ ಹೊಸ ಟಿಕೆಟ್ ಆಕಾಂಕ್ಷಿಗಳು ಮುನ್ನಲೆಗೆ ಬರುತ್ತಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದವರೆಲ್ಲಾ ಇದೀಗ ಸಮಾಜದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಮಾಜಿ ರೌಡಿ ಸೈಲೆಂಟ್ ಸುನೀಲನ ಸರದಿ.
ಇಷ್ಟು ದಿನ ಸೈಲೆಂಟ್ ಆಗಿದ್ದ ರೌಡಿ ಸುನೀಲ್, ರಾಜಕೀಯ ಅಖಾಡಕ್ಕೆ ಧುಮುಕುತ್ತಾನೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸೈಲೆಂಟ್ ಸುನೀಲ್ ಇಂದು ಚಾಮರಾಜಪೇಟೆಯಲ್ಲಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆದಿದೆ.
ಬಿಜೆಪಿ ನಾಯಕರಾದ ಸಂಸದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಹಾಗೂ ಎನ್.ಆರ್. ರಮೇಶ್ ಶುಭ ಹಾರೈಸಿದ್ದಾರೆ. ಸಾರ್ವಜನಿಕ ಜೀವನದ ಜೊತೆಗೆ ರಾಜಕೀಯ ಜೀವನ ಆರಂಭಿಸುತ್ತಿರುವ ಸುನೀಲ್ ಕುಮಾರ್ಗೆ ಶುಭಾಶಯ ಎಂದು ಬಿಜೆಪಿ ನಾಯಕ ಎನ್.ಆರ್.ರಮೇಶ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಸುನೀಲ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಖಚಿತಪಡಿಸಿದಂತಾಗಿದೆ. ಮುಂದಿನ ಚುನಾವಣೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೈಲೆಂಟ್ ಸುನೀಲ್ ಕುಮಾರ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಸೈಲೆಂಟ್ ಸುನೀಲ್ ಸ್ಪರ್ಧಿಸುವ ಸಾಧ್ಯತೆಯಿದೆ. ಇನ್ನು ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಎನ್.ಆರ್. ರಮೇಶ್ ಮಾತನಾಡುತ್ತಾ ಪರೋಕ್ಷವಾಗಿ ಜಮೀರ್ ಅಹ್ಮದ್ ವಿರುದ್ಧ ಟಾಂಗ್ ನೀಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ನಡೆದಿರುವ ನೂರಾರು ಕೋಟಿ ಹಗರಣದ ಬಗ್ಗೆ ದಾಖಲೆ ಇಡುತ್ತೇನೆ. ಕರೊನಾ ವೇಳೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಬೆಂಗಳೂರಿಗೆ ಕಪ್ಪು ಚುಕ್ಕೆ ತರಲಾಗಿದೆ. ಈ ಒಂದು ಕ್ಷೇತ್ರದಲ್ಲಿ ಭಯದ ವಾತಾವರಣ ಇದೆ ಎಂದು ಹೇಳಿದರು.
ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವ ಸೈಲೆಂಟ್ ಸುನೀಲ್ ಕುಮಾರ್, ನಾನು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದೆಯೂ ಬೆಂಗಳೂರಿನಾದ್ಯಂತ ಸಮಾಜಮುಖಿ ಕಾರ್ಯಕ್ರಮ ಮಾಡುತ್ತೇನೆ. ರಾಜಕೀಯ ಪ್ರವೇಶಿಸುವ ಇಚ್ಛೆಯಿದ್ದು, ಈ ಬಗ್ಗೆ ಮುಂದೆ ಸೂಕ್ತ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾನೆ.