ಮುಸ್ಲಿಂ ಟೋಪಿ ಧರಿಸಿ `ಕವ್ವಾಲಿ' ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ಸಚಿವ

ಬೆಂಗಳೂರು : ರಾಜ್ಯದ ಬಿಜೆಪಿ ಸಚಿವರೊಬ್ಬರು ಮುಸ್ಲಿಂ ಸಮುದಾಯದ ಒಲೈಕೆಗೆ ಮುಂದಾಗಿದ್ದು, ಟೋಪಿ ಧರಿಸಿ ಮುಸ್ಲಿಂ ಸಮುದಾಯದ ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಅವರ ಪುತ್ರ ನಿತಿನ್ ಪುರುಷೋತ್ತಮ್ ಭಾಗಿಯಾಗಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಿನ್ನೆ ರಾತ್ರಿ ಸಚಿವ ಎಂಟಿಬಿ ನಾಗರಾಜ್ ಅವರು ಮುಸ್ಲಿಂ ಸಮುದಾಯದವರಿಗಾಗಿ ಕವ್ವಾಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಟೋಪಿ ಹಾಕಿಕೊಂಡು ಮಧ್ಯರಾತ್ರಿಯವರೆಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಪರ ವಿರೋಧ ವ್ಯಕ್ತವಾಗುತ್ತಿದೆ.
ಹೊಸಕೋಟೆಯಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಉರ್ದುವಿನಲ್ಲೇ ಭಾಷಣ ಮಾಡಿದ್ದಾರೆ. ಮಗ ನಿತಿನ್ ಪುರುಷೋತ್ತಮ್ ಕೂಡ ಉರ್ದುವಿನಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಸಚಿವರ ಎದುರಲ್ಲೇ ಕವ್ವಾಲಿ ಹಾಡುಗಾರರ ಮೇಲೆ ಹಣದ ಮಳೆಯೇ ಸುರಿಸಲಾಗಿದೆ. ಸದ್ಯ ಎಂಟಿಬಿ ನಾಗರಾಜ್ ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.