ಮಂಡ್ಯದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ 'ರೌಡಿ ಶೀಟರ್ ಪೈಟರ್ ರವಿ' ಪ್ರತ್ಯಕ್ಷ

ಮಂಡ್ಯದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ 'ರೌಡಿ ಶೀಟರ್ ಪೈಟರ್ ರವಿ' ಪ್ರತ್ಯಕ್ಷ

ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಪೈಟರ್ ರವಿ ಕಾಣಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ರೌಡಿ ಶೀಟರ್ ಜೊತೆ ವೇದಿಕೆಯನ್ನು ಸಚಿವ ಕೆ.ಗೋಪಾಲಯ್ಯ ಹಂಚಿಕೊಂಡಿರೋದು ಮತ್ತಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಕೆ.ಗೋಪಾಲಯ್ಯ ಕೂಡ ಹಾಜರಿದ್ದರು. ಇಂತಹ ಸಚಿವ ಹಾಗೂ ಸರ್ಕಾರಿ ಅಧಿಕಾರಿಗಳ ಜೊತೆ ವೇದಿಕೆಯನ್ನು ಫೈಟರ್ ರವಿ ಹಂಚಿಕೊಂಡಿರೋದಾಗಿ ತಿಳಇದು ಬಂದಿದೆ.

ಇದಷ್ಟೇ ಅಲ್ಲದೇ ಸಚಿವರ ಹಾಗೂ ತಹಶೀಲ್ದಾರ್ ಮಧ್ಯೆ ಕುಳಿತು ಸರ್ಕಾರಿ ಕಡತಗಳನ್ನು ಫೈಟರ್ ರವಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ನಾಗಮಂಗಲ ತಹಶೀಲ್ದಾರ್ ನಂದೀಶ್ ಜೊತೆಗೆ ಫೈಟರ್ ರವಿ ಗುಸುಗುಸು ಮಾತನಾಡಿದ್ದು ಕಂಡು ಬಂದಿದೆ.

ಇನ್ನೂ ಇದಲ್ಲದೇ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೂಡಿ ರೌಡಿ ಶೀಟರ್ ಫೈಟರ್ ರವಿ ಜ್ಯೋತಿ ಕೂಡ ಬೆಳಗಿಸಿದ್ದಾರೆ. ಇದು ಈಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೀಡು ಮಾಡಿದೆ.

ಈ ಕುರಿತಂತೆ ಮಾಧ್ಯಮದವರು ಕೇಳಿದಂತ ಪ್ರಶ್ನೆಗೆ ತಬ್ಬಿಬ್ಬಾದಂತ ಸಚಿವ ಕೆ.ಗೋಪಾಲಯ್ಯ, ಫೈಟರ್ ರವಿ, ಶಾಸಕರು ಹಾಗೂ ನನಗೂ ಸ್ನೇಹಿತರು. ಇಲ್ಲಿ ನಾವೆಲ್ಲ ಒಂದೇ, ಇದು ರಾಜಕೀಯ ಗಿಮಿಕ್ ಅಲ್ಲ. ಸರ್ಕಾರದಿಂದ ಬಗರ್ ಹುಕುಂ ಸಾಗುವಳಿ ಮಂಜೂರಾತಿ ಪತ್ರ ವಿತರಣೆ ಮಾಡಿದ್ದೇವೆ. ಅದು ಬಿಟ್ಟು ಬೇರೆ ಉದ್ದೇಶ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.