ಬೆಂಗಳೂರಿನಲ್ಲಿನ `IPL' ಪಂದ್ಯಾವಳಿ ವೇಳೆ ರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆ

ಬೆಂಗಳೂರಿನಲ್ಲಿನ `IPL' ಪಂದ್ಯಾವಳಿ ವೇಳೆ ರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆ

ಬೆಂಗಳೂರು: ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್-2023 ಹವಾ ಶುರುವಾಗಿದೆ. ಈ ಪಂದ್ಯಾವಳಿಯ ಕೆಲ ಪಂದ್ಯಗಳನ್ನು ಬೆಂಗಳೂರಿನಲ್ಲೂ ನಿಗದಿ ಪಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುವಂತ ಐಪಿಎಲ್ ಪಂದ್ಯಾವಳಿಯಂದು ( IPL Match 2023 ) ಕ್ರಿಕೆಟ್ ಪ್ರಿಯರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸಂಚಾರವನ್ನು ( Namma Metro Service ) ವಿಸ್ತರಿಸಲಾಗಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಂಗಳೂರು ಮೆಟ್ರೋ ರೈಲು ನಿಗಮವು ಏಪ್ರಿಲ್ 2, 10, 17, 26 ಹಾಗೂ ಮೇ.21, 2023ರಂದು ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ರಾತ್ರಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಕ್ರಿಕೆಟ್ ಪ್ರಿಯರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲ ಸಂಚಾರವನ್ನು ರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು ಬೈಯಪ್ಪನಹಳ್ಳಿ, ಕೆಂಗೇರಿ ಮತ್ತು ನಾಸಂದ್ರ, ರೇಷ್ಮೆ ಸಂಸ್ಥೆ ಮಾರ್ಗಗಳಲ್ಲಿ ಮರುದಿನ ಮುಂಜಾನೆಯವರೆಗೆ ಸಂಚರಿಸಲಿದೆ. ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆಯ ಕೊನೆಯ ವಾಣಿಜ್ಯ ರೈಲು ಸೇವೆಯು ಮರುದಿನ ಮುಂಜಾನೆ 1 ಗಂಟೆಗೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಕೊನೆಯ ವಾಣಿಜ್ಯ ರೈಲು ಸೇವೆಯು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮರುದಿನ ಮುಂಜಾನೆ 1.30 ಗಂಟೆಗೆ ಹೊರಡಲಿದೆ ಎಂದು ತಿಳಿಸಿದೆ.

ಇನ್ನೂ ಯಾವುದೇ ಮೆಟ್ರೋ ರೈಲು ನಿಲ್ದಾಣದಿಂದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸಲು ಟೋಕನ್, ಕ್ಯೂ ಆರ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ ಗಳನ್ನು ಉಪಯೋಗಿಸಿ ಪ್ರಯಾಣಿಸಬಹುದು. ಮೆಟ್ರೋ ರೈಲು ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಮಧ್ಯಾಹ್ನ 3 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರಲಿದೆ ಎಂದು ಹೇಳಿದೆ.

ಇನ್ನೂ ರೂ.50ದರದ ಪೇಪರ್ ಟಿಕೆಟ್ ಗಳನ್ನು ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ತಲುಪಲು ರಾತ್ರಿ 8 ಗಂಟೆಯಿಂದ ವಿಸ್ತರಿಸಲಾದ ಕಾಲಾವಧಿಯವರೆಗೆ ಮಾನ್ಯ ಮಾಡಲಾಗುವುದು. ಈ ಪೇಪರ್ ಟಿಕೆಟ್ ಜೊತೆಗೆ ಸ್ಮಾರ್ಟ್ ಕಾರ್ಡ್, ಕ್ಯೂ ಆರ್ ಟಿಕೆಟ್ ಗಳನ್ನು ಬಳಸಿ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದೆ.

ಐಪಿಎಲ್ ಪ್ರಿಯರಿಗೆ ನಿರಾಶೆ ಎನ್ನುವಂತೆ ವೈಟ್ ಫೀಲ್ಡ್ ಮತ್ತು ಕೃಷ್ಣರಾಜಪುರ ನಡುವಿನ ರೈಲು ಸೇವೆಗಳನ್ನು ನಮ್ಮ ಮೆಟ್ರೋ ವಿಸ್ತರಿಸಲಾಗಿರುವುದಿಲ್ಲ ಎಂದು ಹೇಳಿದೆ.

ವರದಿ: ವಸಂತ ಬಿ ಈಶ್ವರಗೆರೆ