ಇಲ್ಲದ ಬದ್ಧತೆ: ಎಲ್ಲೂ ಸಲ್ಲದವರಾಗುತ್ತಿರುವ ಪ್ರಮೋದ್ ಮಧ್ವರಾಜ್

ಇಲ್ಲದ ಬದ್ಧತೆ: ಎಲ್ಲೂ ಸಲ್ಲದವರಾಗುತ್ತಿರುವ ಪ್ರಮೋದ್ ಮಧ್ವರಾಜ್

ಪ್ರಮೋದ್ ಮಧ್ವರಾಜ್ (Photo credit: Twitter@PMadhwaraj)

ಮಂಗಳೂರು, ನ.19: ರಾಜ್ಯಮಟ್ಟದಲ್ಲಾದರೂ ರಾಜಕೀಯದಲ್ಲಿ ಎತ್ತರಕ್ಕೇರಲು ಬೇಕಾದ ಎಲ್ಲಾ ಅನುಕೂಲ ಹಾಗೂ ಅವಕಾಶಗಳನ್ನು ಹೊಂದಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪಕ್ಷ ನಿಷ್ಠೆಯ ಕೊರತೆ, ರಾಜಕಾರಣಿಯೊಬ್ಬನಲ್ಲಿ ಇರಲೇಬೇಕಾದ ಖಚಿತವಾದ ತತ್ವಸಿದ್ಧಾಂತಗಳು, ಸ್ಪಷ್ಟ ನಿರ್ಧಾರಗಳು, ಪ್ರಾಮಾಣಿಕತೆ ಹಾಗೂ ಬದ್ಧತೆಯ ಕೊರತೆಯಿಂದಾಗಿ ಎರಡು ದೋಣಿಗಳಲ್ಲಿ ಕಾಲಿಟ್ಟು ರಾಜಕೀಯವಾಗಿ ಅಪ್ರಸ್ತುತರಾಗುವ ಹಾದಿ ಹಿಡಿದಿದ್ದಾರೆ.

ಪರಿಣಾಮವಾಗಿ ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಲಯದಲ್ಲಿ ಅವರು ಹಾಸ್ಯಾಸ್ಪದರಾಗುತ್ತಿದ್ದಾರೆ. ಚುನಾವಣೆಗೆ ವರ್ಷವಿರುವಾಗ ಗಂಭೀರ ರಾಜಕೀಯ ಚರ್ಚೆಯಲ್ಲಿರಬೇಕಾದ ರಾಜಕಾರಣಿ ಲೇವಡಿಯ ವಸ್ತುವಾಗುತ್ತಿದ್ದಾರೆ ಎಂಬ ಚರ್ಚೆ ಜನರಲ್ಲಿದೆ.

ರಾಜಕೀಯದಲ್ಲಿ ಭವಿಷ್ಯ ಅರಸುವ, ಕನಸು ಕಾಣುವ ಎಲ್ಲವೂ ಪ್ರಮೋದ್ ಮಧ್ವರಾಜ್‌ಗೆ ಹುಟ್ಟಿನೊಂದಿಗೆ ಅನಾಯಾಸವಾಗಿ ಲಭಿಸಿತ್ತು. ರಾಜಕೀಯದ ಆಡಂಬೊಲದಂತಿರುವ ಕುಟುಂಬ, ತಂದೆ ಶಾಸಕರಾಗಿದ್ದವರು. ತಾಯಿಯಂತೂ ಹಲವು ಬಾರಿ ಶಾಸಕರಾಗಿ, ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದವರು. ಒಂದು ಅವಧಿಗೆ ಸಂಸದೆಯಾಗಿಯೂ ಆಯ್ಕೆಯಾಗಿದ್ದವರು.

ಕರಾವಳಿ ಭಾಗದಲ್ಲಿ ಸಂಖ್ಯೆಯ ದೃಷ್ಟಿಯಿಂದ ಹಾಗೂ ರಾಜಕೀಯ ಪ್ರಾಬಲ್ಯದ ನೆಲೆಯಿಂದಲೂ ಪ್ರಬಲವಾದ ಜಾತಿಯ ಬೆಂಬಲವೂ ಪ್ರಮೋದ್ ಮಧ್ವರಾಜ್ ಬೆನ್ನಿಗಿತ್ತು. ತಂದೆ-ತಾಯಿ ಇಬ್ಬರೂ ಈ ಸಮುದಾಯದ ಪ್ರಭಾವಿ ನಾಯಕರಾಗಿದ್ದರಿಂದ ಜನರ ಬೆಂಬಲ ನಿರಾಯಾಸವಾಗಿ ಮಗನಿಗೂ ವರ್ಗಾವಣೆಗೊಳ್ಳಬೇಕಿತ್ತು. ಇಷ್ಟೆಲ್ಲ ಇದ್ದರೂ ಪ್ರಮೋದ್, ಎರಡು ದಶಕಗಳಿಗೂ ಅಧಿಕ ಸಮಯದಿಂದ ರಾಜಕೀಯದ್ದಲ್ಲಿದ್ದರೂ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅಸಮರ್ಥತೆಯಿಂದ, ನಿರ್ಧಾರದ ಹಿಂದೆ ಯಾವುದೇ ತತ್ವ ಸಿದ್ಧಾಂತಗಳಿಲ್ಲದ ಹಾಗೂ ಪ್ರಾಮಾಣಿಕತೆಯ ಕೊರತೆಯಿಂದ ಇಂದು ಎಲ್ಲೂ ಸಲ್ಲದಂತಾಗುತ್ತಿದ್ದಾರೆ ಎಂದು ಅವರ ವಲಯದವರೇ ಹೇಳುತ್ತಿದ್ದಾರೆ.

ಮೂರು ದಶಕಗಳಿಗೂ ಅಧಿಕ ಕಾಲ ಕಾಂಗ್ರೆಸ್ ಪಕ್ಷದಲ್ಲೇ ತನ್ನೆಲ್ಲಾ ರಾಜಕೀಯ ನಡೆಸಿದ್ದ ತಾಯಿ ಮನೋರಮಾ ಮಧ್ವರಾಜ್, 2004ರಲ್ಲಿ ಧಿಡೀರನೇ ಬಿಜೆಪಿ ಸೇರಿ ಸಂಸದೆಯಾಗಿ ಆಯ್ಕೆಯಾದಾಗ, ಅವರನ್ನು ಬಿಜೆಪಿಗೆ ಕರೆದೊಯ್ದ ಹಿರಿಯ ರಾಜಕಾರಣಿ ಎ.ಜಿ.ಕೊಡ್ಗಿಯವರು ಸಭೆಯಲ್ಲಿ 'ಈಗ ತಾಯಿ ಬಂದಿದೆ, ಕರು ಹಿಂಬಾಲಿಸಿ ಬರುತ್ತೆ' ಎಂಬ ಮಾತನ್ನು ಆಗಿನ್ನೂ ಕುಡಿಮೀಸೆಯ ತರುಣರಾಗಿದ್ದ ಪ್ರಮೋದ್ ಅವರನ್ನುದ್ದೇಶಿಸಿ ಹೇಳಿದ್ದರು. ಆದರೆ ಕರು ಇದೀಗ ಬೆಳೆದು ಕಾಂಗ್ರೆಸ್ ಪಾಲಿಗೆ ನಿರುಪಯುಕ್ತವಾಗಿ ಬಿಜೆಪಿಯ ಗೋಶಾಲೆಯ ಕಡೆಗೆ ಆಸೆಯಿಂದ ನೋಡುತ್ತಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಬಹುಮತದೊಂದಿಗೆ ದಿಲ್ಲಿಯಲ್ಲಿ ಜಯಗಳಿಸಿದಾಗ, ಮುಂದಿನ ದಿನಗಳಲ್ಲಿ ಬಿಜೆಪಿ ಅಭೇಧ್ಯದಂತೆ ಪ್ರಮೋದ್‌ಗೆ ಭಾಸವಾಗಿರಲೂಬಹುದು. ಈ ವರ್ಷದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಪತ್ರಿಕೆಯೊಂದು ಪ್ರಮೋದ್ ಬಿಜೆಪಿಯತ್ತ ವಲಸೆ ಹೋಗುವ ಸಾಧ್ಯತೆ ಇದೆ ಎಂಬ ಸೂಚನೆ ನೀಡುವ ವರದಿಯೊಂದನ್ನು ಪ್ರಕಟಿಸಿತ್ತು. ಈ ಬಗ್ಗೆ ಅದೇ ದಿನ ಉಡುಪಿಯ ಶ್ರೀಕೃಷ್ಣ ಮಠದ ಕಾರ್ಯಕ್ರಮವೊಂದರಲ್ಲಿ ಪ್ರಮೋದ್‌ರನ್ನು ಪ್ರಶ್ನಿಸಿದಾಗ, ಅದನ್ನು ತಮಾಷೆ ಎಂಬಂತೆ ಪರಿಗಣಿಸಿ, ಸ್ಪಷ್ಟವಾಗಿ ನಿರಾಕರಿಸದೇ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದರು.

ಹೀಗಾಗಿ ಆರು ವರ್ಷಗಳ ಹಿಂದೆ ಬೆಂಕಿ ಇದ್ದೋ, ಇಲ್ಲದೆಯೋ ಕಾಣಿಸಿ ಕೊಂಡ ಹೊಗೆ ಈಗಲೂ ಆಗಾಗ ಕಕ್ಕುತ್ತಲೇ ಇದೆ. ಬೆಂಕಿಯಾಡದಂತೆ ನಂದಿಸದೇ, ಅದಕ್ಕೆ ತುಪ್ಪ ಹುಯ್ಯುವ ಕೆಲಸವನ್ನು ಆಗಾಗ ಪ್ರಮೋದ್ ಮಾಡುತ್ತಲೇ ಇದ್ದಾರೆ. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಗೊಂದಲದಲ್ಲಿರಿಸಿ, ಇಬ್ಬರ ನಂಬಿಕೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಾಲಿಗೆ ಅನ್ನ ಹಳಸಿದೆ. ಆದರೆ ಈ ಹಳಸಿದ ಅನ್ನದ ಕಡೆಗೆ ಬಿಜೆಪಿಯೂ ಆಸಕ್ತಿ ತೋರದೆ ಇರುವುದು ಪ್ರಮೋದ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಟಿಪ್ಪು ಜಯಂತಿಗೆ ಗೈರು: ಕಳೆದ ನ.17ರಂದು ರಾಜಾಂಗಣದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗೆ ಪದ್ಮವಿಭೂಷಣ ದೊರೆತ ಸಂಬಂಧ ನಡೆದ ಸಮಾರಂಭದಲ್ಲಿ ಯಾವುದೇ ಪ್ರಚೋದನೆ ಇಲ್ಲದೇ ನರೇಂದ್ರ ಮೋದಿ ಅವರನ್ನು ಬಾಯ್ತುಂಬ ಹೊಗಳಿದ ರೀತಿಯಿಂದ ಅವರ ಬಿಜೆಪಿ ಪ್ರವೇಶದ ಸುದ್ದಿ ಮತ್ತೆ ಚಾಲನೆಗೆ ಬರುವಂತಾಯಿತು. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರ ತಂದಿತು. ಆದರೆ ಬಿಜೆಪಿಯೊಳಗೆ ಇದು ನಗೆಪಾಟಲಿನ ವಿಷಯವಾಗಿದ್ದು ವಿಪರ್ಯಾಸ. 2017ರ ನ.10ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೂ ಗೈರುಹಾಜರಾಗಿದ್ದು, ಅಲ್ಲೇ ನಡೆದ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರೂ ಸತತ ಮೂರನೇ ವರ್ಷ ಟಿಪ್ಪು ಜಯಂತಿಗೆ ಬಾರದೇ ಹೋಗಿದ್ದು, ಬಳಿಕ ಅದನ್ನು ಬಾಲಿಶ ಉತ್ತರಗಳೊಂದಿಗೆ ಸಮರ್ಥಿಸಿಕೊಂಡಿದ್ದು, 'ಬಿಜೆಪಿ ಸೇರ್ಪಡೆ' ಸುದ್ದಿ ನಿಜವೆಂದು ಬಹುಸಂಖ್ಯಾತ ಕಾಂಗ್ರೆಸಿಗರೇ ನಂಬುವಂತಾಯಿತು.

ಇದಲ್ಲದೆ ಕೊಳಲಗಿರಿ ಚರ್ಚ್‌ನಲ್ಲಿ ಟಿಪ್ಪುಗೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಹೇಳಿಕೆ, 2018ರ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿಗೆ ಬಾರದಂತೆ ಇಬ್ಬರು ಪ್ರಮುಖರು ಗೇಟು ಹಾಕಿದ್ದಾರೆಂದು ಹೇಳಿದ್ದು, ಇತ್ತೀಚೆಗೆ ಶಾಸಕ ಕೆ.ರಘುಪತಿ ಭಟ್‌ರ ಹಡಿಲು ಗದ್ದೆ ಉಳುಮೆ ಸಂದರ್ಭದಲ್ಲಿ ಅವರ ಜೊತೆ ಖುಷಿಯಿಂದ ಭಾಗವಹಿಸಿದ್ದಲ್ಲದೆ, ಅವರನ್ನು ಮನೆಗೆ ಕರೆದೊಯ್ದು ಉಪಚರಿಸಿದ್ದು ಪ್ರಮೋದ್‌ರ ಕಾಂಗ್ರೆಸ್-ಬಿಜೆಪಿ ರಾಜಕೀಯ ಸರ್ಕಸ್‌ನಲ್ಲಿ ಸದ್ದು ಎಬ್ಬಿಸಿದ ಕೆಲವು ಘಟನೆಗಳು.

ಇದರೊಂದಿಗೆ ಅವರು ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಮುನಿಸಿಗೆ ಕಾರಣವಾಗಿದ್ದು, ಜೆಡಿಎಸ್ ಸೇರಿ ಉಡುಪಿಯಿಂದ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಘಟನೆ. ಇದಕ್ಕಾಗಿ ಜೆಡಿಎಸ್ ಪಕ್ಷ ಸೇರಿ, ಟಿಕೇಟ್ ಪಡೆದು ಸೋತ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿರುವುದು ಹಲವು ವಿವಾದಗಳಿಗೆ, ಮಾತಿನ ಚಕಮಕಿಗೆ ಕಾರಣವಾಗಿದೆ. ಪಕ್ಷದ ರಾಜ್ಯ ನಾಯಕರ ಸೂಚನೆಯಂತೆ ತಾನು ಸ್ಪರ್ಧಿಸಿರುವುದಾಗಿ ಪ್ರಮೋದ್ ಹೇಳಿದ್ದರೂ, ತಳಮಟ್ಟದ ಕಾರ್ಯಕರ್ತರು ಈ ನಡೆಯನ್ನು ಇನ್ನೂ ಒಪ್ಪಿಕೊಂಡಂತಿಲ್ಲ.

ರಘುಪತಿ ಭಟ್‌ರಂತೆ ಯಾವತ್ತೂ ಜನರ ಮಧ್ಯೆ ಬೆರೆತು ರಾಜಕೀಯ ನಡೆಸದೆ, ಜನರಿಂದ ಪ್ರತ್ಯೇಕವಾಗಿದ್ದು, ಅವರಿಂದ ಅಂತರ ಕಾಯ್ದುಕೊಂಡೇ ರಾಜಕೀಯ ನಡೆಸುವ ಪ್ರಮೋದ್ ತಮ್ಮ ಚಂಚಲಚಿತ್ತ ನಿರ್ಧಾರಗಳಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಗೊಂದಲದಲ್ಲಿ ಕೆಡವಿದ್ದಾರೆ. ಅಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಅವರನ್ನು ನಂಬದಂತಹ ಸ್ಥಿತಿ ಇದೆ. ಕೆಲವು ಹಿಂಬಾಲಕರನ್ನು ಬಿಟ್ಟರೆ ಅವರಿಗೆ ಪಕ್ಷದಲ್ಲಿ ಬೆಂಬಲವೂ ಇಲ್ಲದಂತಾಗಿದೆ. ಹೀಗಾಗಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದೇ ಅಪರೂಪ ಎಂಬಂತಾಗಿದೆ. ಹೋಗಲಿ, ಬಿಜೆಪಿಯವರು ಪ್ರಮೋದ್ ಬರುತ್ತಾರೆ ಎಂದು ಅವರ ಬಗ್ಗೆ ಖುಷಿಯಲ್ಲಿದ್ದಾರೆ ಎಂದು ನೋಡಿದರೆ ಅಲ್ಲೂ ಅಂತಹ ಉತ್ಸಾಹದ ವಾತಾವರಣ ಕಾಣುತ್ತಿಲ್ಲ. ಇದು ಯಾವುದೇ ರಾಜಕಾರಣಿಯ ಪಾಲಿಗೆ ಅಪಾಯಕಾರಿ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗಿದೆ.

ರಾಜಕೀಯದಲ್ಲಿ ಸರಿಯಾದ ನಿರ್ಧಾರವನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಅಸಮರ್ಥನಾದ ರಾಜಕಾರಣಿ ಮಾತ್ರ ಇಂಥ ವಿವಾದವನ್ನು ಇಷ್ಟೊಂದು ದೀರ್ಘಕಾಲ ಬೆಳೆಸಿಕೊಂಡು ಬರಬಲ್ಲ. ಇದರಿಂದ ಆತನ ವಿಶ್ವಾಸಾರ್ಹತೆ ಪ್ರಶ್ನಾರ್ಥಕವಾಗಿರುವುದಲ್ಲದೇ, ಜನರ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಜನರ ನಂಬಿಕೆಯನ್ನು ಕಳೆದುಕೊಂಡು ಹೆಚ್ಚುಕಾಲ ರಾಜಕಾರಣ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಪ್ರಮೋದ್ ಎಷ್ಟು ಬೇಗ ತಿಳಿದು ಕೊಳ್ಳುತ್ತಾರೋ ಅಷ್ಟು ಅವರ ಭವಿಷ್ಯದ ರಾಜಕೀಯಕ್ಕೆ ಒಳ್ಳೆಯದು ಎಂಬುದು ಅವರ ಮತದಾರರ ಅನಿಸಿಕೆ.

ಇವರು ಸದ್ಯಕ್ಕೆ ಒಮ್ಮೆ ಕಾಂಗ್ರೆಸ್ ಬಿಟ್ಟು ತೊಲಗಿದರೆ ಸಾಕು ಎನ್ನುವುದು ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಹೆಬ್ಬಯಕೆಯಾದರೆ, ಇತ್ತ ಬಿಜೆಪಿ ಪ್ರಮೋದ್ ಕಾಂಗ್ರೆಸ್‌ನೊಳಗಿದ್ದೇ ಮಂಗಾಟ ಮಾಡುತ್ತಿರಲಿ ಎಂದು ಬಯಸಿದೆ. ಕರುವಾಗಿದ್ದಾಗ ಬಂದಾಗ ಸ್ವೀಕರಿಸಬಹುದಿತ್ತು, ಹಾಲು ಕೊಡದ ಮುದಿ ಹಸುವನ್ನು ಸಾಕುವ ವೆಚ್ಚವನ್ನು ನಾವೇಕೆ ಹೊರಬೇಕು ಎನ್ನುವುದು ಬಿಜೆಪಿ ಮುಖಂಡರ ಪ್ರಶ್ನೆಯಾಗಿದೆ.