ನಾನು ಗಲ್ಲಿಗೇರಲು ಸಿದ್ಧ: ಸುಕೇಶ್ ಚಂದ್ರಶೇಖರ್
ನವದೆಹಲಿ: ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಸರಣಿ ಪತ್ರಗಳ ಮೂಲಕ ಆರೋಪ ಹೊರಿಸುತ್ತಿರುವ ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಮಂಗಳವಾರ ಮತ್ತೊಂದು ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಅದರಲ್ಲಿ ಅವರು, “ನಾನು ಆಮ್ ಆದ್ಮಿ ಪಕ್ಷದ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪ ಸುಳ್ಳಾಗಿದ್ದರೆ, ಗಲ್ಲುಶಿಕ್ಷೆಯನ್ನು ಎದುರಿಸಲೂ ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ನಾನು ಹೇಳಿರುವುದು ಸುಳ್ಳೆಂದಾದರೆ, ಅದನ್ನು ಸಾಬೀತುಪಡಿಸಿ. ಇಲ್ಲದಿದ್ದರೆ, ಕೂಡಲೇ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಕೇಜ್ರಿವಾಲ್‌ರಿಗೆ ಸವಾಲನ್ನೂ ಹಾಕಿದ್ದಾರೆ.
ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಸುಕೇಶ್, “ದೆಹಲಿ ಲೆಫ್ಟಿನೆಂಟ್ ಜನರಲ್‌ಗೆ ನಾನು ಬರೆದಿರುವ ದೂರನ್ನು ವಾಪಸ್ ಪಡೆಯುವಂತೆ ನನಗೆ ಆಪ್‌ನಿಂದ ನಿರಂತರವಾಗಿ ಬೆದರಿಕೆಗಳು ಹಾಗೂ ಒತ್ತಡಗಳು ಬರುತ್ತಿವೆ. ನಾನು ಈವರೆಗೆ ಸುಮ್ಮನೆ ಕುಳಿತಿದ್ದೆ. ಎಲ್ಲವನ್ನೂ ನಿರ್ಲಕ್ಷಿಸುತ್ತಿದ್ದೆ’ ಎಂದೂ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ ಜೈಲಿನಿಂದಲೇ ಲೆ.ಗವರ್ನರ್‌ಗೆ ಪತ್ರ ಬರೆದಿದ್ದ ಸುಕೇಶ್, ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ನನ್ನಿಂದ 10 ಕೋಟಿ ರೂ. ವಸೂಲಿ ಮಾಡಿದ್ದಾರೆ. ಕೇಜ್ರಿವಾಲ್ ಅವರು ನನ್ನನ್ನು ರಾಜ್ಯಸಭೆ ಸದಸ್ಯನನ್ನಾಗಿ ಮಾಡಲು 50 ಕೋಟಿ ರೂ. ಗಳನ್ನು ಕೇಳಿದ್ದರುಎಂದು ಆರೋಪಿಸಿದ್ದರು.