ನ.18ರಿಂದ `ಪಂಚರತ್ನ ರಥಯಾತ್ರೆ' ಮತ್ತೆ ಪುನರಾರಂಭ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಈ ತಿಂಗಳ 18 ಅಥವಾ 20 ರಂದು ಪಂಚರತ್ನ ರಥಯಾತ್ರೆಯ ಮತ್ತೆ ಆರಂಭ ಮಾಡಲಾಗುವುದು. ಈ ಎರಡು ದಿನದಲ್ಲಿ ಒಂದು ದಿನಾಂಕವನ್ನು ಇನ್ನೆರಡು ಮೂರು ದಿನದಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು, ಸಚಿವರಾಗಿದ್ದವರು ಹಾಗೂ ಉಪಮುಖ್ಯಮಂತ್ರಿಯಾಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅವಶ್ಯಕತೆ ಇಲ್ಲ ಎಂದರು.
ಸಿದ್ದರಾಮಯ್ಯ ಹೋದರು ಎಂದು ಕೋಲಾರದಲ್ಲಿ ನಮ್ಮ ಯಾವುದೇ ಕಾರ್ಯತಂತ್ರ ಬದಲಾಗಲ್ಲ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಿದ್ದರಾಮಯ್ಯ ಅಷ್ಟೆ ಅಲ್ಲ, ಯಾರೇ ನಿಂತರೂ ನಮ್ಮ ಪಕ್ಷಕ್ಕೆ ಆತಂಕ ಇಲ್ಲ ಎಂದು ಹೇಳಿದರು.
ಮೋದಿ ಅವರು ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ದಾರೆ. ಇದು ದುಡ್ಡು ಲೂಟಿ ಮಾಡುವ ಡಬಲ್ ಎಂಜಿನ್ನಾ? ಹಣ ಹೊಡೆದುಕೊಂಡು ಹೋಗಿ ದೆಹಲಿಯಲ್ಲಿ ಇಟ್ಟುಕೊಂಡು ಹೋಗೋದಾ? ನಿಮ್ಮ ಡಬಲ್ ಎಂಜಿನ್ ಸರ್ಕಾರನಾ? ಎಂದು ಪ್ರಹಾರ ನಡೆಸಿದ ಅವರು; ವೀರಶೈವ ಸಮುದಾಯದವರು ಸೇರಿ ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
2006ರಲ್ಲಿ ಬಿಜೆಪಿಯ ಯಾವುದೇ ನಿರ್ಧಾರಗಳು ರಾಜ್ಯದಲ್ಲಿ ಆಗುತ್ತಿದ್ದವು. ಈಗ ಎಲ್ಲವೂ ದೆಹಲಿಯಲ್ಲಿ ಆಗುತ್ತವೆ. ರಾಜ್ಯದ ಜನರ ಇದನ್ನ ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಲಕೋಟೆಗಳು ದೆಹಲಿಯಿಂದಲೇ ಬರುತ್ತವೆ. ಕರ್ನಾಟಕ ಲಕೋಟೆ ಎನ್ನುವುದು ಬಿಜೆಪಿಯಲ್ಲಿ ಮುಗಿದ ಅಧ್ಯಾಯ ಎಂದು ಹೇಳಿದರು ಅವರು.