ತಾಯಿಯ ಕಾಲಿನಿಂದ ಹಾವಿನ ವಿಷ ಹೀರಿದ ಮಗಳು ಕೇಸ್‌ನಲ್ಲಿ ತಿರುವು: ಕಾಲಿಗೆ ಕಚ್ಚಿದ್ದು ನಾಗರಹಾವು ಅಲ್ಲ
ಮಂಗಳೂರು, ಮಾರ್ಚ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಯಿ ಕಾಲಿಗೆ ಹಾವು ಕಚ್ಚಿದಾಗ ಮಗಳು ರಕ್ತ ಹೀರಿ ತಾಯಿಯನ್ನು ರಕ್ಷಣೆ ಮಾಡಿದ ಘಟನೆಗೆ ದೊಡ್ಡ ತಿರುವು ದೊರಕಿದೆ. ಈ ಘಟನೆಯಲ್ಲಿ ಮಹಿಳೆಗೆ ತಾಯಿಗೆ ಕಚ್ಚಿರುವುದು ನಾಗರ ಹಾವು ಅಲ್ಲ ಮಲಬಾರ್ ಪಿಟ್ ವೈಪರ್ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ವಿಷಕಾರಿ ಆಗಿರುವ ಈ ಹಾವು ಬಹಳ ನಂಜುಕಾರಿ. ನಂಜು ಹೊರಸೂಸುವ ಈ ಹಾವಿನ ಕಡಿತದಿಂದ ಸಾವು ಸಂಭವ ಕಡಿಮೆಯಾದರೂ ಹಾವು ಕಡಿದ ಜಾಗದಲ್ಲಿ ನಂಜು ಊತ ಏರ್ಪಡುತ್ತದೆ. ತಾಯಿಗೆ ಚಿಕಿತ್ಸೆ ನೀಡಿದ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದು, ಮಮತಾ ರೈ ಕಾಲಿಗೆ ಕಚ್ಚಿದ ಹಾವು ಮಲಬಾರ್ ಪಿಟ್ ವೈಪರ್ ಎನ್ನುವುದುನ್ನು ಸ್ಪಷ್ಟ ಪಡಿಸಿದ್ದಾರೆ.
ಅತ್ಯಂತ ಕಡಿಮೆ ಪ್ರಮಾಣದ ವಿಷ ಹೊಂದಿರುವ ಮಲಬಾರ್ ಪಿಟ್ ವೈಪರ್‌ನ ಕಡಿತಕ್ಕೊಳಗಾದ ತಾಯಿ ಮಮತಾ ರೈ ಒಂದು ದಿನದ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಘಟನೆ ನಡೆದಿದ್ದು, ಮೊದಲು ನಾಗರಹಾವು ಕಡಿತಕ್ಕೊಳಗಾದ ತಾಯಿಗೆ ಪುತ್ರಿಯೇ ಬಾಯಿಯಿಂದ ವಿಷ ಹೀರಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿರುವ ಅಪರೂಪದ ಘಟನೆ ಎಂದು ಸುದ್ದಿ ಯಾಗಿತ್ತು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ರೇಂಜರ್ ಕೂಡ ಆಗಿರುವ ಶ್ರಮ್ಯಾ ರೈ ತನ್ನ ತಾಯಿ ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಅವರನ್ನು ಅಪಾಯದಿಂದ ಪಾರು ಮಾಡಿದ್ದರು.
ಕೆಯ್ಯೂರಿನ ತನ್ನ ಮನೆಯ ಸನಿಹದಲ್ಲೇ ಇರುವ ತಾಯಿ ಮನೆಗೆ ಶ್ರಮ್ಯಾಳ ತಾಯಿ, ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಹೋಗಿದ್ದರು. ಅಲ್ಲಿ ಪಂಪ್ ಸ್ವಿಚ್ ಹಾಕಲೆಂದು ಮಮತಾ ರೈ ಅವರು ತೋಟಕ್ಕೆ ತೆರಳಿದ್ದರು. ಸ್ವಿಚ್ ಹಾಕಿ ಮರಳಿ ಬರುತ್ತಿರುವಾಗ ಕೆರೆಯ ಪಕ್ಕದಲ್ಲಿ ಹಾವನ್ನು ತುಳಿದಿದ್ದು, ಹಾವು ಅವರಿಗೆ ಕಚ್ಚಿತ್ತು.
ಕೂಡಲೇ ಮನೆಗೆ ಮರಳಿ ಕೆಲಸದಾಳಿನ ಸಹಾಯದಿಂದ ಹಾವು ಕಚ್ಚಿದ ಸ್ಥಳದಿಂದ ಮೇಲ್ಭಾಗಕ್ಕೆ ವಿಷ ಏರದಂತೆ ಪಟ್ಟಿ ಕಟ್ಟಿದ್ದರು. ಆದರೆ ಇದು ಹೆಚ್ಚು ಪ್ರಯೋಜನಕಾರಿ ಆಗಲಾರದು ಎಂದರಿತ ಶ್ರಮ್ಯಾ ರೈ ಹಾವು ಕಚ್ಚಿದ ಸ್ಥಳದಲ್ಲಿ ಬಾಯಿಯೂರಿ, ಹೀರಿ ವಿಷ ತೆಗೆದಿದ್ದಾರೆ. ಅದಾದ ಬಳಿಕ ಮಮತಾ ರೈ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶ್ರಮ್ಯಾಳ ಸಮಯ ಪ್ರಜ್ಞೆಯಿಂದಾಗಿ ಮಮತಾ ರೈ ಅವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.
'ಹಾವು ಕಚ್ಚಿದ ವಿಚಾರ ವನ್ನು ತಾಯಿ ಹೇಳಿದರು. ಪಟ್ಟಿ ಕಟ್ಟಿದರೂ ನನಗೆ ವಿಶ್ವಾಸ ಮೂಡದ ಕಾರಣ ಬಾಯಿಯಿಂದಲೇ ಹೀರಿ ವಿಷ ತೆಗೆದು ಹಾಕಿದೆ. ಆಸ್ಪತ್ರೆಯಲ್ಲಿ ವೈದ್ಯರು ವಿಷ ತೆಗೆದದ್ದು ಒಳ್ಳೆಯದಾಯಿತು ಎಂದಿದ್ದಾರೆ. ಇದು ನನ್ನ ಮೊದಲ ಅನುಭವ. ಈ ಹಿಂದೆ ಕೇಳಿ ಹಾಗೂ ಸಿನೆಮಾಗಳಲ್ಲಿ ನೋಡಿ ತಿಳಿದಿದ್ದ ಮಾಹಿತಿಯ ಆಧಾರದಲ್ಲಿ ಇಂತಹ ಪ್ರಥಮ ಚಿಕಿತ್ಸೆ ನಡೆಸುವ ಧೈರ್ಯ ಮಾಡಿದೆ' ಎಂದು ಶ್ರಮ್ಯಾ ರೈ ಹೇಳಿದ್ದರು.
ಈ ಬಗ್ಗೆ ಹೇಳಿದ ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ ಉರಗ ತಜ್ಞ ಭುವನ್ ದೇವಾಡಿಗ, 'ಇದೊಂದು ಅವೈಜ್ಞಾನಿಕ ಮಾದರಿ. ಹಾವಿನ ವಿಷವನ್ನು ಬಾಯಿಯಿಂದ ಹೀರಿ ತೆಗೆಯೋದು ಸರಿಯಾದ ವಿಧಾನವಲ್ಲ. ನಾಗರಹಾವು ಕಚ್ಚಿದರೆ ರಕ್ತ ತಿಳಿಯಾಗುತ್ತದೆ. ಅದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಮಲಬಾರ್ ಪಿಟ್ ವೈಪರ್ ಸಾಮಾನ್ಯವಾಗಿ ಕಾಡಿನಲ್ಲಿ ಇರುವಂತಹ ಹಾವು. ವಿಷಕಾರಿಯ ಜೊತೆಗೆ ಬಹಳ ನಂಜುಕಾರಿ. ಕಚ್ಚಿದ ಜಾಗಕ್ಕೆ ಸರಿಯಾಗಿ ಚಿಕಿತ್ಸೆಯಾಗದಿದ್ದರೆ ಆ ಭಾಗ ಕೊಳೆಯುವ ಸಾಧ್ಯತೆಯೂ ಹೆಚ್ಚು. ಮಗಳು ಬಾಯಿಯಿಂದ ಹೀರಿ ವಿಷ ತೆಗೆದಿರೋದರಿಂದ ಮಗಳೂ ಆರೋಗ್ಯ ತಪಾಸಣೆ ಮಾಡುವುದು ಉತ್ತಮ' ಎಂದು ಹೇಳಿದ್ದಾರೆ.