ತಲೆಮರೆಸಿಕೊಂಡ ನಟಿ ಅಭಿನಯ ಕುಟುಂಬ: ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ!

ತಲೆಮರೆಸಿಕೊಂಡ ನಟಿ ಅಭಿನಯ ಕುಟುಂಬ: ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ!

ತ್ತಿಗೆಗೆ ವರದಕ್ಷಿಣ ಕಿರುಕುಳ ನೀಡಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿರಿಯ ನಟಿ ಅಭಿನಯಾ ಹಾಗೂ ಅವರ ಕುಟುಂಬದವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಚಂದ್ರಲೇಔಟ್ ಪೊಲೀಸರು ತಲೆ ಮರೆಸಿಕೊಂಡಿರುವ ನಟಿ ಅಭಿನಯಾ, ತಾಯಿ ಜಯಮ್ಮ ಹಾಗೂ ಸೋದರ ಚೆಲುವರಾಜು ಅವರ ಪತ್ತೆಗೆ ಬಲೆ ಬೀಸಿದ್ದು, ದೇಶದ ಹೊರಗೆ ಹೋಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಅಲ್ಲದೇ ಅಪರಾಧಿಗಳ ಸುಳಿವು ಸಿಕ್ಕರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

ಸುಮಾರು 20 ವರ್ಷಗಳ ಸುದೀರ್ಘ ವಿಚಾರಣೆ ನಂತರ ಸೆಷನ್ಸ್ ನ್ಯಾಯಾಲಯ ಅಭಿನಯ ಹಾಗೂ ಅವರ ಕುಟುಂಬದವರಿಗೆ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಚಿತ್ರೀಕರಣದಲ್ಲಿ ಬ್ಯೂಸಿ ಇರುವ ನೆಪವೊಡ್ಡ ಕಾಲವಕಾಶ ಕೇಳಿದ್ದ ಕುಟುಂಬ ಇದೀಗ ಏಕಾಏಕಿ ತಲೆಮರೆಸಿಕೊಂಡಿದೆ.

'ಹೆರಿಗೆ ಬಳಿಕ ಪತಿ ಮನೆಯವರು ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪೋಷಕರ ಮನೆಯಲ್ಲಿ ಉಳಿದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಿದರು. ಕೊಲೆ ಬೆದರಿಕೆಯನ್ನೂ ಹಾಕಿದರು. ಅಲ್ಲದೇ ಮನೆಗೆ ಬಂದವರಿಗೆ ಖುಷಿಪಡಿಸು ಎಂದು ಒತ್ತಡ ಹೇರಿದ್ದೂ ಅಲ್ಲದೇ ಕಿರುಕುಳ ನೀಡಿದ್ದಾರೆ ಎಂದು ಚೆಲುವರಾಜು ಅವರ ಪತ್ನಿ ಲಕ್ಷ್ಮಿದೇವಿ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್​ನಲ್ಲಿ ಹೈಕೋರ್ಟ್​ ತೀರ್ಪು ನೀಡಿದ್ದು ಅಭಿನಯಾ, ಅವರ ತಾಯಿ ಮತ್ತು ಸಹೋದರನಿಗೆ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಈ ಮೂವರೂ ತಲೆಮರೆಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಭಿನಯಾ ಅವರು ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಚೊಚ್ಚಲ ಸಿನಿಮಾ 'ಅನುಭವ' ಮೂಲಕ ಅವರು ಹೆಚ್ಚು ಗುರುತಿಸಿಕೊಂಡರು. ಇತ್ತೀಚೆಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆಮಾತಾಗಿದ್ದ ಅಭಿನಯ ಇದೀಗ ತಲೆಮರೆಸಿಕೊಂಡಿದ್ದಾರೆ.