ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ ಸಂಸದೆ ಸುಮಲತಾ ಅಂಬರೀಷ್
ಮಂಡ್ಯ: ಇಷ್ಟು ದಿನಗಳವರೆಗೆ ಯಾವುದೇ ಪಕ್ಷ ಸೇರಲು ತೀರ್ಮಾನ ಮಾಡಿಲ್ಲ ಎಂದು ಹೇಳುಕೊಂಡು ಬಂದಿದ್ದ ಸಂಸದೆ ಸುಮಲತಾ ಅಂಬರೀಷ್ ಇದೀಗ ಕಾಂಗ್ರೆಸ್ ಸೇರಲು ಪ್ರಯತ್ನ ಮಾಡುತ್ತಿರುವುದಾಗಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ಅಡ್ಡಿಯಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರ ವಿರುದ್ಧ ಗರಂ ಆಗಿರುವ ಸುಮಲತಾ, ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಇಷ್ಟ ಇಲ್ಲ ಅಂದರೆ ಓಪನ್ ಆಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸೇರಲು ಪ್ರಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ ಎಂದು ಅರಿತಿರುವ ಸುಮಲತಾ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಜೆಡಿಎಸ್ ಸೇರುವುದಕ್ಕಂತೂ ಸಾಧ್ಯವಿಲ್ಲ. ಅನಿವಾರ್ಯವಾಗಿ ಕಾಂಗ್ರೆಸ್ ಸೇರಬಯಸಿದ್ದಾರೆ. ತಮ್ಮ ಮತ್ತು ಪುತ್ರನ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇಫ್ ಎಂದುಕೊಂಡಿದ್ದ ಸುಮಲತಾ ಅವರ ಲೆಕ್ಕಾಚಾರವನ್ನು ಡಿಕೆಶಿ ತಲೆಕೆಳಗೆ ಮಾಡಿದ್ದಾರೆ.
ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ಅಡ್ಡಿಯಾಗಿದ್ದಾರೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸುಮಲತಾ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವಿಲ್ಲ ಎಂಬುದು ಡಿಕೆಶಿ ಅಭಿಮತ ಎನ್ನಲಾಗಿದೆ. ಸದ್ಯ ಜನರಿಂದ ದೂರವಾಗಿರುವ ಸುಮಲತಾ ಸೇರ್ಪಡೆಯಿಂದ ಯಾವುದೇ ಲಾಭವಿಲ್ಲ ಅಂತಾ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರಂತೆ. ಅಲ್ಲದೆ, ಸುಮಲತಾ ಬಿಜೆಪಿಯ ಅಸೋಸಿಯೇಟ್ ಮೆಂಬರ್ ಎಂದು ಇತ್ತೀಚೆಗೆ ಡಿಕೆಶಿ ಹೇಳಿಕೆ ನೀಡಿದ್ದಾರೆ. ಇದರಿಂದ ಸಿಟ್ಟಾಗಿರುವ ಸುಮಲತಾ, ಪಕ್ಷದ ರಾಜ್ಯಾಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಒಬ್ಬರ ಬಗ್ಗೆ ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ. ನಾನು ಪಕ್ಷೇತರವಾಗಿ ಸ್ಪರ್ಧಿಸೋದಕ್ಕೆ ಮೊದಲು ಕಾಂಗ್ರೆಸ್ ಟಿಕೆಟ್ ಕೇಳಿದ್ದೆ. ಆದರೆ, ಕಾಂಗ್ರೆಸ್ನಿಂದ ಟಿಕೆಟ್ ಕೊಡುವುದಕ್ಕೆ ಆಗಲ್ಲ ಅಂದಾಗ ಮುಂದಿನ ಹೆಜ್ಜೆ ಇಟ್ಟೆ. ಮಂಡ್ಯದಲ್ಲಿ ಪಕ್ಷವನ್ನು ಇನ್ನೂ ಬಲಪಡಿಸಬೇಕು ಎಂಬ ಉದ್ದೇಶ ಇದ್ದಿದ್ರೆ ನಿಮ್ಮ ನಡೆ ಏನು ಅಂತ ನನ್ನನ್ನು ಕೇಳಬಹುದಿತ್ತು. ಅಷ್ಟಕ್ಕೂ ಮಂಡ್ಯದಲ್ಲಿ ಕಾಂಗ್ರೆಸ್ ಬಲವರ್ಧನೆ ಮಾಡಬೇಕು ಎಂಬ ಉದ್ದೇಶ ನಿಮಗೆ ಇದೆ ಅನ್ನೋದೆ ನನಗೆ ಅನುಮಾನ. ಈಗ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಪಕ್ಷಕ್ಕೆ ಬರಬೇಕು ಅಂತ ಆಸೆ ಪಡ್ತಾರೆ. ಪಕ್ಷಕ್ಕೆ ಬಂದ್ರೆ ಸಂಘಟನೆ ಮತ್ತಷ್ಟು ಚೆನ್ನಾಗಿ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ನಾಯಕರ ಮಟ್ಟದಲ್ಲಿ ಆಹ್ವಾನ ಬರದೆ ನಾನು ಯಾರ ಹತ್ತಿರನೂ ಕೈ ಚಾಚಲ್ಲ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಆಹ್ವಾನ ನೀಡಿದ್ರೆ ಕಾಂಗ್ರೆಸ್ಗೆ ಸೇರುತ್ತೇನೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ ಸುಮಲತಾ, ಮಂಡ್ಯ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳಲ್ಲಿ ಒಳ ಒಪ್ಪಂದದ ರಾಜಕೀಯ ನಡೆಯುತ್ತಿದೆ. ಜೆಡಿಎಸ್ ಬಲವಾಗುವುದಕ್ಕೆ ಕಾಂಗ್ರೆಸ್ನ ಕೆಲವೊಂದು ನಾಯಕರು ಕಾರಣ ಎನ್ನುವ ಮೂಲಕ ಪರೋಕ್ಷವಾಗಿ ಡಿಕೆಶಿ, ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್)