ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಶೀಘ್ರವೇ 'ಪಶುಸಂಗೋಪನ ಇಲಾಖೆ'ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ - ಸಚಿವ ಪ್ರಭು ಚೌವ್ಹಾಣ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಶೀಘ್ರವೇ 'ಪಶುಸಂಗೋಪನ ಇಲಾಖೆ'ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ - ಸಚಿವ ಪ್ರಭು ಚೌವ್ಹಾಣ್

ಬೆಳಗಾವಿ : ಪಶುಸಂಗೋಪನೆ ಇಲಾಖೆಯಲ್ಲಿ ( veterinary department ) ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅನುಮತಿ ದೊರೆತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ( Minister Prabhu Chauhan ) ಧನ್ಯವಾದಗಳನ್ನು ತಿಳಿಸಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದಿದ್ದರಿಂದ ಸಮರ್ಪಕವಾಗಿ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಿಲ್ಲೆಗೊಂದು ಗೋಶಾಲೆ ಪ್ರಾಣಿ ಕಲ್ಯಾಣ ಸಹಾಯವಾಣಿ ಸೇರಿದಂತೆ ಇತ್ತೀಚೆಗೆ ಪರಿಚಯಿಸಿದ ಇಲಾಖೆಯ ಯೋಜನೆಗಳು ಸಿಬ್ಬಂದಿಗಳ ಕೊರತೆಯಿಂದ ಹಿನ್ನಡೆ ಆಗುತ್ತಿತ್ತು.

ಪ್ರತಿಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಅಧಿವೇಶನದ ಸಂದರ್ಭದಲ್ಲಿ ವಿಧಾನಪರಿಷತ್ ಹಾಗೂ ವಿಧಾನಸಭೆಯಲ್ಲಿ ಸದಸ್ಯರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಿಬ್ಬಂದಿಗಳ ಕೊರತೆ ಕುರಿತು ಪ್ರಶ್ನೆ ಹಾಕುವುದು ವಾಡಿಕೆಯಾಗಿತ್ತು.

ಕಳೆದ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ನೇಮಕಾತಿ ಕುರಿತು ಚರ್ಚೆ ನಡೆಸಿದ್ದೆ. ಅಲ್ಲದೆ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಶುಸಂಗೋಪನೆ ಇಲಾಖೆಗೆ ನೇಮಕಾತಿಯಲ್ಲಿ ಇರುವ ತೊಡಕುಗಳ ಕುರಿತು ಮಾತುಕತೆ ನಡೆಸಿದ್ದೆ ಸಚಿವರು ತಿಳಿಸಿದ್ದಾರೆ.

ಪಶುಸಂಗೋಪನೆ ಇಲಾಖೆಯಲ್ಲಿ ಗುರುತರ ಬದಲಾವಣೆ ತರುವ ಸಲುವಾಗಿ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಭಿವೃದ್ಧಿ ಮಾದರಿಗಳನ್ನು ನಮ್ಮಲ್ಲಿಯೂ ಸಹ ಅಳವಡಿಸಿಕೊಳ್ಳಲು ಆಲೋಚಿಸಿದಾಗ ನಮ್ಮಲ್ಲಿನ ಸಿಬ್ಬಂದಿ ಕೊರತೆಯಿಂದ ಪ್ರತಿಬಾರಿ ಸಮಸ್ಯೆ ಎದುರಾಗುತ್ತಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕಾರ ಮಾಡಿಕೊಂಡ ನಂತರ ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಗಳಿಂದ ಎದುರಾಗುತ್ತಿರುವ ಸಮಸ್ಯೆ ಕುರಿತು ಹಲವು ಬಾರಿ ಚರ್ಚೆ ನಡೆಸಲಾಗಿತ್ತು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯಿಂದಾಗಿ ಇಲಾಖೆಯ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ವೇಗ ದೊರೆಯಲಿದ್ದು ಪಶುಸಂಗೋಪನೆ ಇಲಾಖೆ ಮತ್ತಷ್ಟು ಚುರುಕಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.