ಟೀಮ್ ಇಂಡಿಯಾಗೆ ಸಣ್ಣ ಮುನ್ನಡೆಯೂ ಬಹಳ ಮಹತ್ವವಾಗಲಿದೆ: ಮೊಹಮ್ಮದ್ ಶಮಿ

ಟೀಮ್ ಇಂಡಿಯಾಗೆ ಸಣ್ಣ ಮುನ್ನಡೆಯೂ ಬಹಳ ಮಹತ್ವವಾಗಲಿದೆ: ಮೊಹಮ್ಮದ್ ಶಮಿ

ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದರೂ ಆಸ್ಟ್ರೇಲಿಯಾ ತಂಡ ದೊಡ್ಡ ಪ್ರಮಾಣದ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. 263 ರನ್‌ಗಳಿಗೆ ಆಸ್ಟ್ರೇಲಿಯಾ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

ಈ ಮೂಲಕ ಮೊದಲ ದಿನ ಹಿನ್ನಡೆ ಅನುಭವಿಸಿದೆ. ಬಳಿಕ ಭಾರತ ತಂಡ ಬ್ಯಾಟಿಂಗ್ ಆರಂಭಿಸಿದ್ದು 9 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 21 ರನ್‌ಗಳಿಸಿದೆ.

ಮೊದಲ ದಿನದಾಟದ ಬಳಿಕ ಟೀಮ್ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದು ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಅಲ್ಪ ಪ್ರಮಾಣದ ಮುನ್ನಡೆ ಪಡೆಯಲು ಸಾಧಗ್ಯವಾದರು ಕೂಡ ತಂಡಕ್ಕೆ ಅದರಿಂದ ದೊಡ್ಡ ಅನುಕೂಲವಿದೆ ಎಂದಿದ್ದಾರೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೂವರು ಸ್ಪಿನ್ನರ್‌ಗಳು ಹಾಗೂ ಓರ್ವ ವೇಗಿಯೊಂದಿಗೆ ಕಣಕ್ಕಿಳಿದಿದೆ. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಆಸ್ಟ್ರೇಲಿಯಾದ ಸ್ಪಿನ್ ತ್ರಿವಳಿಗಳಾದ ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್ ಮತ್ತು ನಾಥನ್ ಲಿಯಾನ್ ಅವರಿಂದ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

"ಎದುರಾಳಿ ತಂಡ ಕೇವಲ ಓರ್ವ ವೇಗಿಯನ್ನು ಹೊಂದಿದೆ. ನಾವಿಲ್ಲಿ ಬೌನ್ಸ್ ಹಾಗೂ ಸ್ಪಿನ್ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಾವು ಇಲ್ಲಿ ಸಣ್ಣ ಮುನ್ನಡೆ ಪಡೆದರು ಕೂಡ ನಗೆ ಅದು ಅನುಕೂಲವಾಗಲಿದೆ" ಎಂದಿದ್ದಾರೆ ಮೊಹಮ್ಮದ್ ಶಮಿ. ಇನ್ನು ಇದೇ ಸಂದರ್ಭದಲ್ಲಿ ಅವರು ನಾಗ್ಪುರ ಪಿಚ್‌ಗೂ ದೆಹಲಿ ಪಿಚ್‌ಗೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದಿದ್ದಾರೆ.

"ಭಾರತದಲ್ಲಿ ನೀವು ಪಿಚ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸ ನೋಡಲು ಸಾಧ್ಯವಿಲ್ಲ. ಹೊಸ ಚೆಂಡಿನಲ್ಲಿ ನೀವು ಅನುಕೂಲ ಪಡೆದರೆ ಹಳೆಯ ಚೆಂಡಿನಲ್ಲಿ ರಿಚರ್ಸ್ ಸ್ವಿಂಗ್ ಮೂಲಕ ಲಾಭ ಪಡೆಯಬಹುದು. ವೇಗದ ಬೌಲರ್ ಆಗಿ ಭಾರತೀಯ ಪರಿಸ್ಥಿತಿಗಳಲ್ಲಿ ಮುಖ್ಯ ವಿಷಯವೆಂದರೆ ನೀವು ಬೌಲಿಂಗ್ ಮಾಡುವ ಪ್ರದೇಶವನ್ನು ಗುರಿಯಾಗಿಸಿಕೊಳ್ಳುವುದರ ಜೊತೆಗೆ ವೇಗವನ್ನು ಕಾಪಾಡಿಕೊಳ್ಳಬೇಕು" ಎಂದಿದ್ದಾರೆ ಮೊಹಮ್ಮದ್ ಶಮಿ.

ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು ಭಾರತದ ಅನುಬವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ತಲಾ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪರವಾಗಿ ಮೊದಲ ಪಂದ್ಯದಲ್ಲಿ ವಿಫಲವಾಗಿದ್ದ ಉಸ್ಮಾನ್ ಖವಾಜ ಈ ಪಂದ್ಯದಲ್ಲಿ 81 ರನ್‌ಗಳಿಸಿ ತಂಡಕ್ಕೆ ನೆರವಾದರು. ಇನ್ನು ಕೆಳ ಕ್ರಮಾಂಕದಲ್ಲಿ ಹ್ಯಾಂಡ್ಸ್‌ಕಾಂಬ್ ಅಜೇಯ 72 ರನ್‌ಗಳ ಕೊಡುಗೆ ನೀಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ನೆರವಾಗಿದ್ದಾರೆ. ಇನ್ನು ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಈ ಪಂದ್ಯದಲ್ಲಿ 33 ರನ್‌ಗಳ ಕೊಡುಗೆ ನೀಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡ 78.4 ಓವರ್‌ಗಳಲ್ಲಿ 263 ರನ್‌ಗಳನ್ನು ಗಳಿಸಿ ಆಲೌಟ್ ಆಗಿದೆ.

ಇತ್ತಂಡಗಳ ಆಡುವ ಬಳಗ

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಬೆಂಚ್: ಸೂರ್ಯಕುಮಾರ್ ಯಾದವ್, ಶುಬ್ಮನ್ ಗಿಲ್, ಇಶಾನ್ ಕಿಶನ್, ಕುಲದೀಪ್ ಯಾದವ್, ಉಮೇಶ್ ಯಾದವ್

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುನ್ನೆಮನ್

ಬೆಂಚ್: ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಅಗರ್, ಲ್ಯಾನ್ಸ್ ಮೋರಿಸ್, ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್