ಜೆಡಿಎಸ್ ನಿಂದ ಶಾಸಕ ಕೆ.ಎಂ ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ ಔಟ್: ಎ.ಮಂಜು ಇನ್

ಜೆಡಿಎಸ್ ನಿಂದ ಶಾಸಕ ಕೆ.ಎಂ ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ ಔಟ್: ಎ.ಮಂಜು ಇನ್

ಬೆಂಗಳೂರು: ಹಾಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಸಭೆ ಕರೆದಾಗ ಅವರು ಬಂದಿಲ್ಲ. ಎರಡು ವರ್ಷದಿಂದ ಅವರು ಪಕ್ಷದಿಂದ ದೂರ ಇದ್ದಾರೆ. ಈಗಾಗಲೇ ಎ.ಮಂಜು ಅವರ ಜತೆ ಮಾತಾಡಿದ್ದೇನೆ.

ರೇವಣ್ಣ ಅವರು ಕೂಡ ಎ.ಮಂಜು ಜತೆ ಮಾತಾಡಿದ್ದಾರೆ. ಎ.ಮಂಜು ಅವರಿಗೆ ಕ್ಲಿಯರ್ ಆಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಕೇಂದ್ರ ಸಚಿವರು ತಾವು ಕೂತಿರುವ ಹುದ್ದೆಯ ಘನತೆಯನ್ನು ಮರೆತು ಮಾತನಾಡಿದ್ದಾರೆ. ಅವರಿಗೆ ಅವರದೇ ಭಾಷೆಯಲ್ಲಿ ಹೇಳುವುದಾದರೆ, ಅವರು ವಿಜಯ ಸಂಕಲ್ಪ ಯಾತ್ರೆ ಮಾಡುವ ಬದಲು ' ಸಿಡಿ ಸಂಕಲ್ಪ ಯಾತ್ರೆ ' ನಡೆಸಲಿ. ಅವರ ಯಾತ್ರೆಗೆ ಸಿಡಿ ಸಂಕಲ್ಪ ಯಾತ್ರೆ ಎನ್ನುವುದು ಸರಿಯಾದ ಹೆಸರು ಎಂದು ಪ್ರಹ್ಲಾದ್ ಜೋಷಿ ಅವರಿಗೆ ಟಾಂಗ್ ನೀಡಿದರು.

ಈ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಯಾವುದೇ ಕ್ಷೇತ್ರದ ಅಭ್ಯರ್ಥಿ ಬಗ್ಗೆ ನಮಗೆ ಗೊಂದಲ ಇಲ್ಲ. ಈಗಾಗಲೇ ಘೋಷಿತ ಅಭ್ಯರ್ಥಿಗಳ ಪೈಕಿ ಒಂದಿಷ್ಟು ಬದಲಾವಣೆ ಆಗಬಹುದು. ಆರೇಳು ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ನಮ್ಮ ನಿರೀಕ್ಷೆಗಳಿಗೆ ತಲುಪದೇ ಇರುವ ಅಭ್ಯರ್ಥಿಗಳ ಬದಲಾವಣೆ ಮಾಡುತ್ತೇವೆ ಎಂದರು ಕುಮಾರಸ್ವಾಮಿ ಅವರು.

ನಮ್ಮ ಪಕ್ಷದ ಮಿಷನ್ 123 ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, 140 ಗುರಿ ಇಟ್ಟುಕೊಂಡು ಹೋಗಿದ್ದಾರೆ. ಆ 140ರಲ್ಲಿ 1 ತೆಗೆದುಬಿಡಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಪಕ್ಷ ಉಳಿಸಲು ನಾವು ನಮ್ಮ ಮನೆಯವರಿಗೆ ಟಿಕೆಟ್ ನೀಡಿದ್ದೇವೆ. ಅಂತಹ ಕಾರಣಕ್ಕೆ ನಾನು ಕೂಡ ಎರಡು ಕಡೆ ನಿಂತೆ. ಕೊನೆ ಹಂತದಲ್ಲಿ ಅಭ್ಯರ್ಥಿ ಇಲ್ಲ ಅಂತ ತಲೆ ಕೊಟ್ಟಿದ್ದೇವೆ. ಒಮ್ಮೆ ಸೋತಿದ್ದೇವೆ, ಒಮ್ಮೆ ಗೆದ್ದಿದ್ದೇವೆ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಉಬ್ಬಿಲ್ಲ. ಕುಟುಂಬ ರಾಜಕಾರಣ ಬಗ್ಗೆ ಮಾತಾಡೋಕೆ ನೈತಿಕತೆ ಬೇರೆ ಪಕ್ಷಗಳಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಹೇಳಿದರು.

ಹಾಸನ ಟಿಕೆಟ್ ವಿಚಾರದ ಬಗ್ಗೆ ಇನ್ನೂ ಯಾವುದೇ ಚರ್ಚ ಆಗಿಲ್ಲ. ಮಾಧ್ಯಮದಲ್ಲಿ ನಾನು ಮಾತಾಡಿರೋದು ಅಷ್ಟೆ. ಎರಡು ಮೂರು ದಿನದಲ್ಲಿ ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ದಯಮಾಡಿ ಪದೇಪದೆ ದೇವೇಗೌಡರ ಹೆಸರು ತರಬೇಡಿ ಎಂದು ಅವರು ಮನವಿ ಮಾಡಿದರು.