ಚೀನಾ ಸೇರಿ 5 ದೇಶಗಳಿಂದ ಬರುವ ಪ್ರಯಾಣಿಕರಿಗೆ 'RT-PCR' ನೆಗೆಟಿವ್ ವರದಿ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ

ಚೀನಾ ಸೇರಿ 5 ದೇಶಗಳಿಂದ ಬರುವ ಪ್ರಯಾಣಿಕರಿಗೆ 'RT-PCR' ನೆಗೆಟಿವ್ ವರದಿ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ

ವದೆಹಲಿ: ಚೀನಾ ಸೇರಿದಂತೆ ವಿದೇಶಗಳಲ್ಲಿ ಕೋವಿಡ್ (covid) ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೆ ಸರ್ಕಾರ ಚೀನಾ ಮತ್ತು ಇತರ ಐದು ಸ್ಥಳಗಳಿಂದ ಬರುವ ಪ್ರಯಾಣಿಕರು ಮುಂದಿನ ವಾರದಿಂದ ನೆಗೆಟಿವ್ ಆರ್‌ಟಿ-ಪಿಸಿಆರ್ (RT-PCR) ವರದಿಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನವರಿಯಲ್ಲಿ ದೇಶದಲ್ಲಿ ಕೋವಿಡ್ ಉಲ್ಬಣಗೊಳ್ಳುವ ಆತಂಕ ಹೆಚ್ಚಾಗಿದ್ದು, ಮುಂದಿನ 40 ದಿನಗಳು ನಿರ್ಣಾಯಕ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಸಿದೆ.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್, ಥೈಲ್ಯಾಂಡ್ ಮತ್ತು ಸಿಂಗಾಪುರದಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂದಿನ ವಾರದಿಂದ 'ಏರ್ ಸುವಿಧಾ' ಫಾರ್ಮ್‌ಗಳನ್ನು ಭರ್ತಿ ಮಾಡುವುದು. 72 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳಲ್ಲಿ ದೇಶಕ್ಕೆ ಆಗಮಿಸಿದ ಸುಮಾರು 6 ಸಾವಿರ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ 39 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಪರೀಕ್ಷೆ ಮತ್ತು ಸ್ಕ್ರೀನಿಂಗ್ ಸೌಲಭ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ, ಸರ್ಕಾರವು ಎಚ್ಚರಿಕೆ ನೀಡಿದ್ದು, ಯಾವುದೇ ಘಟನೆಗೆ ಸಿದ್ಧರಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸಿದೆ.

ಡಿಸೆಂಬರ್ 24 ರಿಂದ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಯಾದೃಚ್ಛಿಕ ಕೊರೊನಾ ಪರೀಕ್ಷೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ.