ಒಂದೇ ತಿಂಗಳಲ್ಲಿ ಬಿರುಕು ಬಿಟ್ಟ ದೇಶದ ಮೊದಲ 'ರ‍್ಯಾಪಿಡ್ ರಸ್ತೆ': ಬಿಬಿಎಂಪಿಗೆ ಶಾಪ ಹಾಕಿದ ಬೆಂಗಳೂರು ಜನ

ಬೆಂಗಳೂರು, ಡಿಸೆಂಬರ್ 09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತ್ತೀಚೆಗೆ ಹಳೆ ಮದ್ರಾಸ್ ರಸ್ತೆಯಲ್ಲಿ ರ‍್ಯಾಪಿಡ್ ರೋಡ್ ಟೆಕ್ನಾಲಜಿ (RRT) ಬಳಸಿಕೊಂಡು ರಸ್ತೆ ನಿರ್ಮಾಣವನ್ನು ಕೈಗೆತ್ತಿಕೊಂಡಿತ್ತು. ಕೇವಲ ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆ ಉದ್ಘಾಟನೆ ಮಾಡಿದ್ದು, 40 ವರ್ಷ ಬಾಳಿಕೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು.
ನಿನ್ನೆ (ಭಾನುವಾರ) ಮಧ್ಯಾಹ್ನ, ಬಿಬಿಎಂಪಿ ಕಾರ್ಮಿಕರೊಬ್ಬರು ಕಾಂಕ್ರೀಟ್ ಬ್ಲಾಕ್‌ಗಳ ನಡುವಿನ ಬಿರುಕನ್ನು ಟಾರ್‌ನಿಂದ ತುಂಬುತ್ತಿರುವುದು ಕಂಡುಬಂದಿದೆ. ಐದಾರು ಕಾಂಕ್ರೀಟ್ ಬ್ಲಾಕ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಲ ವಾಹನ ಸವಾರರು ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ ಅಳವಡಿಸುವ ಮುನ್ನ ಬಿಬಿಎಂಪಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು 'ಬೆಂಗಳೂರು ಮಿರರ್' ವರದಿ ಮಾಡಿದೆ.
'ದೇಶದಲ್ಲಿಯೇ ಮೊದಲ ರ‍್ಯಾಪಿಡ್ ರೋಡ್ ಎಂದು ಬಿಂಬಿಸಲಾದ ಈ ರಸ್ತೆಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲಾಗಿದೆ. ರ‍್ಯಾಪಿಡ್ ರೋಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ನಿರ್ಮಾಣಗೊಂಡ ಒಂದೇ ತಿಂಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು ಬಿರುಕು ಬಿಟ್ಟಿರುವುದನ್ನು ಕಂಡು ನಿರಾಸೆಯಾಗಿದೆ,' ಎಂದು ವಾಹನ ಸವಾರರಾದ ಪ್ರಯಾಣಿಕರಾದ ಮುನಿಕೃಷ್ಣ ಎಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ವೈಟ್ ಟ್ಯಾಪಿಂಗ್ ಅಥವಾ ಡಾಂಬರೀಕರಣಕ್ಕಿಂತ RRT ಅನ್ನು ಬಳಸುವ ನಿರ್ಮಾಣಕ್ಕೆ ಹೆಚ್ಚಿನ ಹಣದ ಅಗತ್ಯವಿದೆ. ಈ ರಸ್ತೆಯು ದೀರ್ಘಕಾಲ ಉಳಿಯುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಸಿಮೆಂಟ್ ಬ್ಲಾಕ್‌ಗಳಲ್ಲಿ ಈಗಾಗಲೇ ಒಂದು ತಿಂಗಳೊಳಗೆ ಬಿರುಕುಗಳು ಕಾಣಿಸಿಕೊಂಡಿವೆ. ರಸ್ತೆ ಬಹಳ ದಿನ ಬಾಳಿಕೆ ಬರದಿದ್ದರೆ ಇದರಿಂದ ಏನು ಪ್ರಯೋಜನ?' ಎಂದ ಆಟೊ ರಿಕ್ಷಾ ಚಾಲಕ ರಮೇಶ್ ಎಸ್ ಪ್ರಶ್ನಿಸಿದ್ದಾರೆ.
ರಸ್ತೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಗರದ ಇತರ ರಸ್ತೆಗಳನ್ನು ನಿರ್ಮಿಸಲು ಆರ್‌ಆರ್‌ಟಿಯನ್ನು ಬಳಸುವುದ ಬಗ್ಗೆ ಮುಂದೆ ಯೋಚಿಸಲಾಗುವುದು. ಇದು ಹಳೆ ಮದ್ರಾಸ್ ರಸ್ತೆಯ ವಿಸ್ತರಣೆಯ ಬಾಳಿಕೆ ಅವಲಂಬಿಸಿರುತ್ತದೆ ಎಂದು ಹೇಳಿದ್ದರು.
ಈ ರಸ್ತೆ ಬಗ್ಗೆ ಮಾತನಾಡಿರುವ ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು, ಹಳೆ ಮದ್ರಾಸ್ ರಸ್ತೆಯಲ್ಲಿ ರ‍್ಯಾಪಿಡ್ ರೋಡ್ ನಿರ್ಮಾಣವನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಈ ತಂತ್ರಜ್ಞಾನ ಉತ್ತಮ ಎಂದು ಸಾಬೀತಾದರೆ, ಇತರ ರಸ್ತೆಗಳಿಗೂ ವಿಸ್ತರಿಸಲಾಗುವುದು. ಈ ರಸ್ತೆಯಲ್ಲಿ ಉತ್ತಮವಾಗಿಲ್ಲದಿದ್ದರೆ, ಈ ತಂತ್ರಜ್ಞಾನವನ್ನು ಬಳಸಲಾಗುವುದಿಲ್ಲ' ಎಂದು ಹೇಳಿದ್ದರು.
ರಸ್ತೆಯ ಗುಣಮಟ್ಟ ಮತ್ತು ಬಾಳಿಕೆಗೆ ಸಂಬಂಧಿಸಿದ ವರದಿಯನ್ನು, ಈ ಕಾಮಗಾರಿಗೆ ನಿಯೋಜಿಸಲಾದ ಏಜೆನ್ಸಿಯಿಂದ ಬಿಬಿಎಂಪಿ ಇನ್ನೂ ಸ್ವೀಕರಿಸಿಲ್ಲ ಎಂದು ನಾನು ಭಾವಿಸುತ್ತೇನೆ ಎಂದೂ ರಘ ತಿಳಿಸಿದ್ದಾರೆ.
ಪೆಟ್ರೋಲ್ ಪಂಪ್ ಮತ್ತು ಡಿ ಭಾಸ್ಕರನ್ ರಸ್ತೆ ಜಂಕ್ಷನ್ ನಡುವಿನ ಮಾರ್ಗವನ್ನು ಶೀಘ್ರದಲ್ಲೇ ವೈಟ್‌ಟಾಪ್ ಮಾಡುವ ಕಾರ್ಯವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದ್ದಾರೆ.
ಬಿಬಿಎಂಪಿ ಇಂಜಿನಿಯರ್ ಇನ್ ಚೀಫ್ ಬಿ.ಎಸ್. ಪ್ರಹ್ಲಾದ್ ಮಾತನಾಡಿ, 'ರಸ್ತೆ ಬಾಳಿಕೆ ಕುರಿತು ಬಿಬಿಎಂಪಿಗೆ ವರದಿ ಬರಬೇಕಿದೆ. ಆರ್‌ಆರ್‌ಟಿಯನ್ನು ಉತ್ತಮಗೊಳಿಸುವ ಅವಶ್ಯಕತೆಯಿದೆ' ಎಂದು ತಿಳಿಸಿದ್ದಾರೆ.
ನಗರದ ಇತರ ರಸ್ತೆಗಳಲ್ಲಿ ಆರ್‌ಆರ್‌ಟಿ ಬಳಸುವ ಬಗ್ಗೆ ಕಾರ್ಯಸಾಧ್ಯತೆಯ ಅಧ್ಯಯನ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಒಪ್ಪಿಸಲಾಗಿದೆ.
ಕಳೆದ ತಿಂಗಳು ಡಿಸೆಂಬರ್ 8ರಂದು ರ‍್ಯಾಪಿಡ್ ರಸ್ತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.