ಉದ್ಯೋಗ ಖಾತರಿ ಯೋಜನೆ : ಏಪ್ರೀಲ್ 01 ರಿಂದ ಕೂಲಿ 316 ರೂ. ನಿಗದಿ

ಉದ್ಯೋಗ ಖಾತರಿ ಯೋಜನೆ : ಏಪ್ರೀಲ್ 01 ರಿಂದ ಕೂಲಿ 316 ರೂ. ನಿಗದಿ

ಕೊಪ್ಪಳ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2023ರ ಏಪ್ರೀಲ್ 01 ರಿಂದ ಒಂದು ದಿನಕ್ಕೆ ರೂ. 316 ಕೂಲಿಯನ್ನು ನಿಗದಿಪಡಿಸಲಾಗಿದೆ.

ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಮತ್ತು ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ.

ಈ ಯೋಜನೆಯಡಿ ಅರ್ಹ ನೋಂದಾಯಿತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ರೂ. 309 ರಿಂದ ರೂ. 316 ಕ್ಕೆ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೋಂದಾಯಿತ ಅರ್ಹಕೂಲಿಕಾರರು ಈ ಸೌಲಭ್ಯವನ್ನು 2023ರ ಏಪ್ರೀಲ್ 01 ರಿಂದ ಪಡೆಯಲು ಅರ್ಹರಿರುತ್ತಾರೆ.

ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸುವುದು, ನೈಸರ್ಗಿಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆರ್ಥಿಕ ಭದ್ರತೆ ಒದಗಿಸುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ಒಂದರಿಂದ ಎರಡು ಸಮುದಾಯ ಆಧಾರಿತ ಮತ್ತು ಕನಿಷ್ಟ 50 ವೈಯಕ್ತಿಕ ಕಾಮಗಾರಿಗಳಲ್ಲಿ ಕೂಲಿಕಾರರಿಗೆ ಉದ್ಯೋಗ ಒದಗಿಸಲು ಕ್ರಮಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಗ್ರಾಮೀಣ ಜನರಿಗೆ ಕೆರೆ ಹೂಳೆತ್ತುವ, ಅಮೃತ ಸರೋವರ, ವೈಜ್ಞಾನಿಕ ಉಪಚಾರದ ಮುಖಾಂತರ ಜಲಸಂಜೀವಿನಿ ಯೋಜನೆಯ ಕಾಮಗಾರಿಗಳು, ಕೃಷಿ ಹೊಂಡ, ಬದು ನಿರ್ಮಾಣ, ಕೊಳವೆ ಭಾವಿ ಮರು ಪೂರಣಘಟಕ, ನಾಲಾ ಅಭಿವೃದ್ಧಿ, ಅರಣ್ಯೀಕರಣ, ರೇಷ್ಮೆ ಬೆಳೆ, ತೋಟಗಾರಿಕೆ, ಗೋಕಟ್ಟೆ ನಿರ್ಮಾಣಇನ್ನು ಹಲವು ಕಾಮಗಾರಿಗಳಲ್ಲಿ ಕೂಲಿಕಾರರಿಗೆ ಒದಗಿಸಲಾಗುತ್ತಿದೆ.

ಯೋಜನೆಯ ಮಾರ್ಗಸೂಚಿಯಂತೆ ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಪ್ರಸಕ್ತ 2023ರ ಏಪ್ರೀಲ್ 01 ರಿಂದ ಒಂದು ದಿನಕ್ಕೆ ರೂ. 316 ಕೂಲಿಯನ್ನು ನಿಗದಿಪಡಿಸಲಾಗಿದೆ. ಈ ಕೂಲಿ ಹಣವನ್ನು ಇ-ಎಫ್‌ಎಂಎಸ್ ಮುಖಾಂತರ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಉದ್ಯೋಗ ಚೀಟಿಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಪಡೆಯಬೇಕು. ಕೂಲಿಕಾರರು ಉದ್ಯೋಗಕ್ಕಾಗಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಕೆಲಸವನ್ನು ಒದಿಗಿಸಲಾಗುತ್ತಿದೆ. ನರೇಗಾ ಯೋಜನೆಯಿಂದ ದುಡಿಯೋಣ ಬಾ ಅಭಿಯಾನ ಹಾಗೂ ಮಹಿಳಾ ಕಾಯಕೋತ್ಸ ಅಭಿಯಾನಗಳನ್ನು ಎಪ್ರಿಲ್ ಮಾಹೆಯಿಂದ ಐಇಸಿ ಚಟುವಟಿಕೆಗಳ ಮುಖಾಂತರ ಹಮ್ಮಿಕೊಳ್ಳಲಾಗುತ್ತಿದ್ದು ಜಿಲ್ಲೆಯ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಒದಗಿಸಲು ಅಗತ್ಯ ಕ್ರಮವಹಿಸಲಾಗಿದೆ.

ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐ.ಇ.ಸಿ) ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೂಲಿಕಾರರನ್ನು ಸಂಘಟಿಸಲಾಗಿದ್ದು, 40 ರಿಂದ 50 ಕೂಲಿಕಾರರಿರುವ ಕಾರ್ಮಿಕ ಸಂಘಗಳನ್ನು ರಚಿಸಿ ಆ ಸಂಘಕ್ಕೆ ಒಬ್ಬಕಾಯಕ ಬಂಧುವನ್ನು ನೇಮಿಸಲಾಗಿದೆ. ಕೂಲಿ ಬೇಡಿಕೆ ಪಡೆಯಲು ಗ್ರಾಮ ಪಂಚಾಯತಿಗಳ ವಾರ್ಡಗಳಲ್ಲಿ, ಎಸ್.ಸಿ ಅಥವಾ ಎಸ್.ಟಿ ಕಾಲೋನಿಗಳಲ್ಲಿ, ಸಣ್ಣಅತೀ ಸಣ್ಣರೈತರ ಓಣಿಗಳಲ್ಲಿ ರೋಜ್‌ಗಾರ್ ದಿವಸ್‌ಗಳನ್ನು ಆಚರಿಸಿ ಕೂಲಿಕಾರರಿಂದ ಬೇಡಿಕೆಗಳನ್ನು ಪಡೆದು ಕೂಲಿಯನ್ನು ಒದಗಿಸಲಾಗುತ್ತಿದೆ.

'ಜಿಲ್ಲೆಯ 7 ತಾಲ್ಲೂಕುಗಳ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಟಾನ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೂಲಿಕಾರರು ನರೇಗಾ ಯೋಜನೆಯಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಉತ್ತಮ ಮಾನವ ದಿನಗಳನ್ನು ಸೃಜಿಸಲು ಕ್ರಮವಹಿಸಲಾಗಿದೆ.