ಇಂದು ಸಿಜೆಐ ಯು.ಯು.ಲಲಿತ್‌ ನಿವೃತ್ತಿ; ಧನ್ಯತೆ, ಸಂತೃಪ್ತಿಯ ಭಾವದಿಂದ ವಿದಾಯ ಎಂದ ಸಿಜೆಐ

ಇಂದು ಸಿಜೆಐ ಯು.ಯು.ಲಲಿತ್‌ ನಿವೃತ್ತಿ; ಧನ್ಯತೆ, ಸಂತೃಪ್ತಿಯ ಭಾವದಿಂದ ವಿದಾಯ ಎಂದ ಸಿಜೆಐ

ವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಅವರ ಸೇವಾವಧಿ ಪೂರ್ಣಗೊಂಡಿದ್ದು, ಮಂಗಳವಾರ ನಿವೃತ್ತಿಯಾಗಲಿದ್ದಾರೆ.

ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್‌ ಅವರು ಮಂಗಳವಾರ ಪದಗ್ರಹಣ ಮಾಡಲಿದ್ದಾರೆ.

ತಮ್ಮ ಉತ್ತರಾಧಿಕಾರಿ ನ್ಯಾ.ಡಿ.ವೈ.ಚಂದ್ರಚೂಡ್‌ ಅವರೊಂದಿಗೆ ಸೋಮವಾರ ಕೊನೆಯದಾಗಿ ಸುಪ್ರೀಂ ಕೋರ್ಟ್‌ನ ಔಪಚಾರಿಕ ಪೀಠವನ್ನು ಅಲಂಕರಿಸಿ ಮಾತನಾಡಿದ ಹಾಲಿ ಸಿಜೆಐ ಲಲಿತ್‌, ತಾವು ಪರಿಪೂರ್ಣತೆಯ ಭಾವದಿಂದ ಮತ್ತು ಸಂತೃಪ್ತಿಯಿಂದ ವಿದಾಯ ಹೇಳುತ್ತಿರುವುದಾಗಿ ತಿಳಿಸಿದರು. ಜತೆಗೆ, ವಕೀಲ ಹಾಗೂ ಜಡ್ಜ್ ಆಗಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ 37 ವರ್ಷಗಳ ಪಯಣವನ್ನು ಮೆಲುಕು ಹಾಕಿದರು.

ಸರ್ವೋಚ್ಚ ನ್ಯಾಯಾಲಯಕ್ಕೆ ಜಡ್ಜ್ ಆಗಿ ಬರುವ ಎಲ್ಲರಿಗೂ ತಮ್ಮದೇ ಆದ ಸಾಮರ್ಥ್ಯವಿರುತ್ತದೆ. ಹಾಗಾಗಿ, ಅವರೆಲ್ಲರಿಗೂ ಸಂವಿಧಾನ ಪೀಠಗಳ ಭಾಗವಾಗಲು ಸಮಾನ ಅವಕಾಶ ಸಿಗಬೇಕು. ನಾನು ಇಲ್ಲೇ ಪ್ರಾಕ್ಟೀಸ್‌ ಮಾಡಿದ್ದೆ. ಆದರೆ, ಏಕಕಾಲಕ್ಕೆ ಎರಡು ಸಂವಿಧಾನ ಪೀಠಗಳು ಒಟ್ಟಿಗೆ ಸಿಟ್ಟಿಂಗ್‌ ನಡೆಸಿದ್ದನ್ನು ನೋಡಿಲ್ಲ. ಈಗ 3 ಸಂವಿಧಾನ ಪೀಠಗಳು ಏಕಕಾಲಕ್ಕೆ ಕಾರ್ಯನಿರ್ವಹಿಸುವುದನ್ನು ನೋಡುತ್ತಿರುವುದು ನನಗೆ ಅವಿಸ್ಮರಣೀಯ, ಸಂತೃಪ್ತಿಯ ಭಾವ ಒದಗಿಸಿದೆ ಎಂದೂ ನ್ಯಾ.ಲಲಿತ್‌ ಹೇಳಿದರು.

ಅಲ್ಲದೇ, ಅತ್ಯಂತ ವಿಶಿಷ್ಟ ಹಾಗೂ ಗೌರವಾನ್ವಿತ ವ್ಯಕ್ತಿಯಾದ ನ್ಯಾ.ಡಿ.ವೈ.ಚಂದ್ರಚೂಡ್‌ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದೇನೆ. ಇದೊಂದು ಸುಂದರ ಗಳಿಗೆ. ಇದಕ್ಕಿಂತ ದೊಡ್ಡ ಭಾಗ್ಯ ಬೇರಾವುದೂ ಇಲ್ಲ ಎಂದೂ ಅವರು ನುಡಿದರು.