ಆರೋಗ್ಯ ಇಲಾಖೆ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ: ವಿಧಾನಸಭೆಯಲ್ಲಿ ಶಾಸಕ ಬಂಡೆಪ್ಪ ಕಾಶ್ಯಂಪುರ್ ಒತ್ತಾಯ

ಆರೋಗ್ಯ ಇಲಾಖೆ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ: ವಿಧಾನಸಭೆಯಲ್ಲಿ ಶಾಸಕ ಬಂಡೆಪ್ಪ ಕಾಶ್ಯಂಪುರ್ ಒತ್ತಾಯ

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವಂತ ನೌಕರರನ್ನು ಖಾಯಂಗೊಳಿಸುವಂತೆ ಜೆಡಿಎಸ್ ಶಾಸಕ ಬಂಡೆಪ್ಪ ಕಾಶ್ಯಂಪುರ್ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

ಗುರುವಾರದಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದಂತ ಅವರು, ಕೊರೋನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಆರೋಗ್ಯ ಇಲಾಖೆಯ ಎನ್ ಹೆಚ್‌ಎಂ ಗುತ್ತಿಗೆ ನೌಕರರು ಖಾಯಂ ನೌಕರರಂತೇ ದುಡಿದಿದ್ದಾರೆ ಎಂದರು.

ಈಗಾಗಲೇ ಒಡಿಸ್ಸಾ, ಮಣಿಪುರ, ರಾಜಸ್ಥಾನ, ಪಂಜಾಬ್ ಗಳಲ್ಲಿ ಎನ್ ಹೆಚ್‌ಎಂ ನೌಕರರನ್ನು ಖಾಯಂ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರನ್ನು ಖಾಯಂಗೊಳಿಸಬೇಕು. ಈ ಮೂಲಕ ಸರ್ಕಾರ ಅವರ ಬಗ್ಗೆ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಗುತ್ತಿಗೆ ನೌಕರರು ಅಂತಿಮವಾಗಿ ಕೇಳುವಂತದ್ದು ಅವರ ವೇತನವನ್ನು ಹೆಚ್ಚಳ ಮಾಡಬೇಕು ಎಂಬುದಾಗಿದೆ. ಶೇ.15ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ನಿನ್ನೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ. ಬಹುಶಹ ಒಂದೆರಡು ದಿನಗಳಲ್ಲಿ ಆದೇಶ ಹೊರಬಂದು ವೇತನ ಕೂಡ ಹೆಚ್ಚಾಗಲಿದೆ ಎಂದರು.

ಎನ್ ಹೆಚ್‌ಎಂ ನೌಕರರನ್ನು ಖಾಯಂ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ

ಅವರ ಬಹುಮುಖ್ಯ ಬೇಡಿಕೆಗಳಲ್ಲಿ ಮತ್ತೊಂದು ಅಂದರೇ ಗುತ್ತಿಗೆ ನೌಕರರನ್ನು ಖಾಯಂ ನೌಕರರನ್ನಾಗಿ ಮಾಡಬೇಕು ಎಂಬುದಾಗಿದೆ. ಇದು ಕೇವಲ ಆರೋಗ್ಯ ಇಲಾಖೆಯಲ್ಲಿ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಇಲಾಖೆಯಲ್ಲೂ ಇದೆ. ಅದರಲ್ಲೂ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರು ಯೋಜನೆ ಇರೋವರೆಗೆ ಇರಲಿದ್ದಾರೆ. ಅವರನ್ನು ಖಾಯಂ ಮಾಡುವುದು ಸರ್ಕಾರದ ಮುಂದೆ ಇಲ್ಲ. ಅದು ಸರ್ಕಾರಕ್ಕೂ ಕಷ್ಟವಾಗಲಿದೆ. ಆದರೇ ಇಲ್ಲಿಯವರೆಗೆ ನೇಮಕಗೊಂಡಂತ ಯಾವುದೇ ಒಬ್ಬ ಎನ್ ಹೆಚ್‌ಎಂ ನೌಕರರನ್ನು ಕಾರಣವಿಲ್ಲದೇ ನಾವು ತೆಗೆದು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

12ನೇ ದಿನಕ್ಕೆ ಕಾಲಿಟ್ಟ ಎನ್ ಹೆಚ್‌ಎಂ ನೌಕರರ ಪ್ರತಿಭಟನೆ

ಮತ್ತೊಂದೆಡೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ನೌಕರರು ಖಾಯಂಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರಕ್ಕೆ ತಮ್ಮನ್ನು ಖಾಯಂಗೊಳಿಸೋ ವರೆಗೆ ಪ್ರತಿಭಟನೆಯನ್ನು ವಾಪಾಸ್ ಪಡೆಯೋದಿಲ್ಲ ಎಂಬುದಾಗಿ ಅನಿರ್ಧಿಷ್ಠಾವಧಿಯ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಸದನದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದಂತೆ ನಮಗೆ 20, 26 ಸಾವಿರ ರೂ ವೇತನ ಸಿಗುತ್ತಿಲ್ಲ. ಅವರು ಹೇಳುತ್ತಿರುವುದು ಸುಳ್ಳು. ನಮಗೆ ಅದಕ್ಕಿಂತ ಕನಿಷ್ಠ ವೇತನ ಸಿಗುತ್ತಿದೆ. ಅದೇ ಖಾಯಂ ನೌಕರರಿಗೆ ನಮಗಿಂತ ದುಪ್ಪಟ್ಟು ವೇತನ ನೀಡಲಾಗುತ್ತಿದೆ. ಅವರು ಮಾಡುವುದು, ನಾವು ಮಾಡುತ್ತಿರೋದು ಒಂದೇ ಕೆಲಸ. ಈ ತಾರತಮ್ಯವನ್ನು ನಿವಾರಿಸಬೇಕು. ನಮ್ಮನ್ನು ಖಾಯಂಗೊಳಿಸಲೇ ಬೇಕು ಎಂಬುದಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ