ಅನರ್ಹ ಕಟ್ಟಡ ಕಾರ್ಮಿಕರಿಗೆ ಬಿಗ್ ಶಾಕ್ : ಕಾರ್ಡ್ ರದ್ದತಿಗೆ ಅಭಿಯಾನ ಆರಂಭ
ಶಿವಮೊಗ್ಗ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ರವರ ಆದೇಶದಂತೆ ನಕಲಿ ದಾಖಲೆಗಳನ್ನು ನೀಡಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡ್‍ಗಳನ್ನು ರದ್ದು ಪಡಿಸಲು ಜಿಲ್ಲೆಯಲ್ಲಿ ಫೆ.25 ರವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಕಾರ್ಮಿಕರಲ್ಲದವರು ತಮ್ಮ ಸ್ವ-ಇಚ್ಛೆಯಿಂದ ಎಲ್ಲಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹೋಗಿ ಮೂಲ ಗುರುತಿನ ಚೀಟಿಯನ್ನು ಸಲ್ಲಿಸತಕ್ಕದ್ದು. ಇಲ್ಲವಾದಲ್ಲಿ ಕಾರ್ಮಿಕ ನಿರೀಕ್ಷಕರು ಖುದ್ದು ಸ್ಥಳ ಪರಿಶೀಲನೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದ ಮತ್ತು ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅನರ್ಹ ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ನೀಡುವ ವ್ಯಕ್ತಿ, ಸಂಸ್ಥೆ, ಪ್ರಾಧಿಕಾರ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೀಬಿರಂಗಯ್ಯ ತಿಳಿಸಿರುತ್ತಾರೆ.