ವಾರ್ಡ್ ರಸ್ತೆಗಳನ್ನು ಮುಚ್ಚಲು ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು
ರಸ್ತೆಗುಂಡಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಹಾಗೂ ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿ, ಪಾಲಿಕೆಯ ಹಾಟ್ ಮಿಕ್ಸ್ ಪ್ಲಾಂಟ್ ನಿಂದ 16 ಲೋಡ್ ಡಾಂಬರನ್ನು ನೀಡುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸತತವಾಗಿ ಮಳೆ ಬಿದ್ದ ಪರಿಣಾಮ ಪ್ಲಾಂಟ್ ನಲ್ಲಿ ಜೆಲ್ಲಿ ಉತ್ಪಾದಿಸಲು ಸಾಧ್ಯವಾಗದ ಕಾರಣ ರಸ್ತೆ ಗುಂಡಿಗಳನ್ನು ನಿಗದಿತ ಸಮದಲ್ಲಿ ಮುಚ್ಚಲು ಆಗಿಲ್ಲ. ಈ ಸಂಬಂಧ ಅಕ್ಟೋಬರ್ 10ರೊಳಗೆ ಪ್ರಮುಖ ರಸ್ತೆಗಳು ಹಾಗೂ ಅಕ್ಟೋಬರ್ 20 ರಿಂದ 25 ರೊಳಗಾಗಿ ವಾರ್ಡ್ ರಸ್ತೆಗಳನ್ನು ಮುಚ್ಚಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಈಗಾಗಲೇ 246 ಕಿ.ಮೀ ಉದ್ದದ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ 203 ಕಿ.ಮೀ ಉದ್ದದ ರಸ್ತೆಗಳನ್ನು ಮುಚ್ಚಬೇಕಿದ್ದು, ಅಕ್ಟೋಬರ್ 10ರೊಳಗಾಗಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದರು.