SMK ರಾಜಕೀಯ ನಿವೃತ್ತಿ ನಂತರವೂ BJP ಗೆ ಶ್ರೀರಕ್ಷೆ - ಸಿ.ಟಿ ರವಿ
ಮಂಡ್ಯ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ರಾಜಕೀಯ ನಿವೃತ್ತಿ ನಂತರವೂ ಬಿಜೆಪಿ ಪಕ್ಷಕ್ಕೆ ಅವರ ಆಶೀರ್ವಾದ ಇರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಮದ್ದೂರು ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಛೇರಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಪಿ.ಸ್ವಾಮಿ ಹಾಗೂ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ವಯಸ್ಸು ಮತ್ತು ಆರೋಗ್ಯದ ಕಾರಣದಿಂದಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ಕೆಲ ಸಚಿವರ ಹಣೆಬರಹವನ್ನು ಬಿಡುಗಡೆ ಮಾಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಮುಂದಿನ ದಿನಗಳಲ್ಲಿ ಯಾಕೇ ? ಸ್ವಾಮಿ ಏನಾದರೂ ಇದ್ರೆ ಈಗಲೇ ಬಿಡುಗಡೆ ಮಾಡಿ. ಅದು ಬಿಟ್ಟು ಹಾವು ಬಿಡ್ತಿನಿ, ಹಾವು ಬಿಡ್ತಿನಿ ಅನ್ನೋದ್ಯಾಕೆ ಇದ್ದರೆ ಈಗಲೇ ಬಿಟ್ಟು ಬಿಡಿ ಎಂದು ವ್ಯಂಗ್ಯವಾಡಿದರು.
ಇನ್ನು ವಿಧಾನಸೌಧದಲ್ಲಿ 10 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈ ಪ್ರಕರಣ ಸಂಬಂಧ ಈಗಾಗಲೇ ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ನಾನು ತನಿಖೆಗೆ ಮುಂಚೆ ಯಾರಿಗೂ ಕ್ಲಿನ್ ಚಿಟ್ ಕೊಡಲ್ಲ. ಯಾರನ್ನು ದೋಷಿಯಾಗೂ ಮಾಡೋದಿಲ್ಲ. ಮತ್ತೆ ಕೆಲವರು ಟೂಲ್ ಕಿಟ್ ರಾಜಕಾರಣ ಮಾಡೋದಕ್ಕೆ ಈ ತರ ಮಾಡಿರ್ತಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ಆಪ್ತ ಸಹಾಯಕರ ಕಛೇರಿಯಲ್ಲಿ ಟಿಫನ್ ಕ್ಯಾರಿಯರ್ ನಲ್ಲಿ ಹಣ ಸಿಕ್ಕಿತ್ತು. ಅದನ್ನು ಸಹ ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳಲಿ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.
ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳ ಗೋಡೆಗಳು ಸಹ ಕಾಸು, ಕಾಸು ಎನ್ನುತ್ತಿವೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ ನಮ್ಮ ಸರ್ಕಾರದಲ್ಲಿ ಆ ರೀತಿಯ ಭ್ರಷ್ಟಾಚಾರ ಇಲ್ಲ. ಡಿಕೆಶಿ ಪವರ್ ಮಿನಿಸ್ಟರ್ ಆಗಿದ್ದಾಗ ಸೋಲಾರ್ ಹಂಚಿಕೆ ಹೇಗಾಯ್ತು ಅಂತ ರಾಜ್ಯದ ಜನತೆಗೆ ಗೊತ್ತು. 800, 1000 ಪಟ್ಟು ಆಸ್ತಿ ಹೆಚ್ಚಳ ಹೇಗಾಯ್ತು ಅಂತ ನಾಡಿನ ಜನತೆಗೆ ಜಗಜ್ಜಾಹೀರು ಆಗಿರುವುದು ಇತಿಹಾಸ ಎಂದು ಡಿ.ಕೆ.ಶಿವಕುಮಾರ್ ಕಾಲೇಳೆದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾಯಿ ನಿಯತ್ತಿನ ಪ್ರಾಣಿ. ನಮ್ಮ ನಿಯತ್ತು ರಾಜ್ಯದ ಬಡವರ, ದಲಿತರ ಪರ. ನಮಗೆ ನಿಯತ್ತು ಇದ್ದಿದ್ದಕ್ಕೆ ಮೀಸಲಾತಿ ಹೆಚ್ಚಳ, ಕಿಸಾನ್ ಸಮ್ಮಾನ್ ಯೋಜನೆ, ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ, ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ್ದಕ್ಕೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಮಟಾಸ್ ಮಾಡಿದ್ದೀವಿ.ಈ ನಿಯತ್ತು ಇಲ್ಲದಿರುವವರು ಇದ್ದಾರಲ್ಲಾ ಅವು ಕಮ್ಯೂನಿಸ್ಟ್ ಚೀನಾ ಜೊತೆಗೆ ಹೋಗಿ ಅಗ್ರಿಮೆಂಟ್ ಮಾಡ್ಕೋತ್ತಾರೆ. ನಾವು ನಿಯತ್ತು ಇರೋ ಜನ. ನಮ್ಮ ಸಂಬಂಧ ದೇಶದ ಜತೆಗೆ ಇಟ್ಟುಕೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಎಂಎಫ್ - ಅಮುಲ್ ವಿಲೀನಗೊಳಿಸುವ ಪೀಠಿಕೆ ಹಾಕಿರುವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧ ಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಮುಲ್ - ನಂದಿನಿ ನಮ್ಮ ದೇಶದ ಎರಡು ಸಂಸ್ಥೆಗಳು ಪರಸ್ಪರ ಸಹಕಾರದಿಂದ ಬೇರೆ ದೇಶಗಳ ವಿರುದ್ಧ ಸ್ಪರ್ಧೆ ಮಾಡಲಿ ಎಂಬ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಮಳಿಗೆಗಳಲ್ಲಿ ನಮ್ಮ ವಸ್ತುಗಳ ಮಾರಾಟ. ನಮ್ಮ ಮಳಿಗೆಗಳಲ್ಲಿ ಅವರ ವಸ್ತುಗಳ ಮಾರಾಟ ಮಾಡುವ ಮೂಲಕ ಒಂದೇ ಖರ್ಚಿನಲ್ಲಿ ಎರಡು ಸಂಸ್ಥೆಗಳು ಬೆಳೆಯುತ್ತವೆ ಎಂಬ ಸಲಹೆಯನ್ನು ನೀಡಿದ್ದಾರೆ ಅಷ್ಟೇ ಎಂದು ಪರೋಕ್ಷವಾಗಿ ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಜಿ.ಪಂ ಮಾಜಿ ಸದಸ್ಯ ಸಾದೊಳಲು ಕೃಷ್ಣೇಗೌಡ, ಗ್ರಾ.ಪಂ ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ಚಿಕಮರಿಯಪ್ಪ, ಮನು,ಶಿವದಾಸ್ ಸತೀಶ್, ಜಗನ್ನಾಥ್, ಮಹೇಶ್, ವೀರಭದ್ರಸ್ವಾಮಿ, ನಗರಕೆರೆ ಪ್ರಸನ್ನ, ಮಧು, ಅಭಿ, ಶಿವು, ಸುಧಾಕರ್, ದ್ಯಾವಯ್ಯ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ