ಸಿಎಂ ಬೊಮ್ಮಾಯಿ ಕೆಳಗಿಳಿಸಲು ಸ್ವಪಕ್ಷೀಯರಿಂದಲೇ ಸ್ಕೆಚ್​: Bitcoin ಹಗರಣದ Exclusive News!

ಸಿಎಂ ಬೊಮ್ಮಾಯಿ ಕೆಳಗಿಳಿಸಲು ಸ್ವಪಕ್ಷೀಯರಿಂದಲೇ ಸ್ಕೆಚ್​: Bitcoin ಹಗರಣದ Exclusive News!
ನವದೆಹಲಿ, ನ. 12: ರಾಜ್ಯ ಬಿಜೆಪಿಗೂ ಬಂಡಾಯ, ಭಿನ್ನಮತಗಳಿಗೂ ಅವಿನಭಾವ ಸಂಬಂಧ. ಒಂದಕ್ಕೊಂದು ಬಿಟ್ಟಿರಲಾರದಂತಹ ನಂಟು... ಇದ್ದ ಅಸಮಾಧಾನ, ಆಕ್ರೋಶಗಳನ್ನು ಹೋಗಲಾಡಿಸಿ ರಾಜಕೀಯ ಅಸ್ಥಿರತೆ (Political uncertainty) ಕೊನೆಗಾಣಿಸಬೇಕೆಂದು ಬಿ.ಎಸ್. ಯಡಿಯೂರಪ್ಪ (B.S. Yadiyurappa) ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ಮುಖ್ಯಮಂತ್ರಿ ಮಾಡಲಾಯಿತು.
ಆದರೆ ಈಗ ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಂಡಾಯ ಶುರುವಾಗಿದೆ. ಎಷ್ಟರಮಟ್ಟಿಗೆ ಎಂದರೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಹಗರಣವನ್ನು (Bitcoin Scam) ಬಳಸಿಕೊಂಡು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ತಿಳಿದುಬಂದಿದೆ.

ಸಿಎಂ ಕೆಳಗಿಳಿಸಲು ಮಹಾಷಡ್ಯಂತ್ರ!?

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದಲೂ ರಾಜ್ಯ ಬಿಜೆಪಿಯ ಕೆಲವು ನಾಯಕರು 'ಬಸವರಾಜ ಬೊಮ್ಮಾಯಿ ಮೂಲ ಬಿಜೆಪಿಯವರಲ್ಲ; ಜೆಡಿಯುನಿಂದ ಬಿ.ಎಸ್. ಯಡಿಯೂರಪ್ಪ ಮೂಲಕ‌ ಬಿಜೆಪಿಗೆ ಬಂದು ಅನಿವಾರ್ಯ ಕಾರಣಗಳಿಂದಾಗಿ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಂಡವರು. ಆದುದರಿಂದ 'ಹೊರಗಿನವರು', 'ಆಕ್ಸಿಡೆಂಟಲ್ ಸಿಎಂ' ಎಂದುಕೊಂಡಿದ್ದಾರೆ. ಆದರೆ ಬೊಮ್ಮಾಯಿ ಅವರನ್ನು ಕುರ್ಚಿಯ ಮೇಲೆ ಕೂರಿಸಿದ್ದು ಹೈಕಮಾಂಡ್ ಆಗಿರುವ ಕಾರಣಕ್ಕೆ ಯಾರೂ ಬಾಯಿ ಬಿಡುತ್ತಿರಲಿಲ್ಲ.

'ಪಕ್ಷನಿಷ್ಠರ' ಗೌಪ್ಯ ಸಭೆ!

ಯಾವಾಗ ಬಿಜೆಪಿ (BJP) ಹಾನಗಲ್ ಉಪ ಚುನಾವಣೆಯಲ್ಲಿ ಸೋಲು ಕಂಡಿತೋ ಮತ್ತು ಬಿಟ್ ಕಾಯಿನ್ ಹಗರಣದ ಚರ್ಚೆ ಶುರುವಾಯಿತೋ 'ಒಳಗಿನ' ಅಥವಾ ಮೂಲ ಬಿಜೆಪಿ ನಾಯಕರು 'ಪಕ್ಷ ನಿಷ್ಠರ ಹೆಸರಿನಲ್ಲಿ ಸಭೆ ಸೇರಲು‌ ಶುರುಮಾಡಿದ್ದಾರೆ ಎಂದು ಗೊತ್ತಾಗಿದೆ.
ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಸಂದರ್ಭದಲ್ಲಿ ಸದ್ದಿಲ್ಲದೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಲು ಸಂಘಪರಿವಾರದ ಮೂಲಕ ಪ್ರಬಲವಾಗಿ ಲಾಬಿ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ನಾಯಕರೊಬ್ಬರ ಸರ್ಕಾರಿ ಬಂಗಲೆಯಲ್ಲಿ 'ಈ ಪಕ್ಷನಿಷ್ಠರು' ಸಭೆ ಸೇರಿದ್ದಾರೆ. ಅವರದ್ದೆ 'ಅಧ್ಯಕ್ಷತೆಯಲ್ಲಿ' ಸಭೆ ನಡೆದಿದೆ.

ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷರು, ಕೇಂದ್ರದ ಮಾಜಿ ಸಚಿವರು ಭಾಗವಹಿಸಿದ್ದಾರೆ. ರಾಜ್ಯದ ಹಾಲಿ ಸಚಿವರೊಬ್ಬರು ತಮ್ಮ ಹಿಂದಿನ ಕೆಲಸ 'ಮುಖ್ಯ ಸಚಕೇತನ' ಪಾತ್ರ ನಿರ್ವಹಿಸಿದ್ದಾರೆ ಎಂಬ ಖಚಿತ ಮಾಹಿತಿಗಳು ಲಭ್ಯವಾಗಿವೆ. ಇನ್ನೂ ಕೆಲವರು ಅದರಲ್ಲೂ ಮುಖ್ಯಮಂತ್ರಿ ಆಗಿದ್ದವರು, ಆಗಬೇಕು ಎಂದು ಕನಸು ಕಾಣುತ್ತಿರುವವರು ಕೂಡ ಸಭೆಯಲ್ಲಿ ಇದ್ದರು ಎಂಬ ಮಾಹಿತಿಯೂ ಇದೇಯಾದರೂ ಅದು ಇನ್ನಷ್ಟು ಖಚಿತವಾಗಬೇಕಾಗಿದೆ.

ಅಲರ್ಟ್ ಆದ ಸಿಎಂ ಬೊಮ್ಮಾಯಿ!

ಈ ಸುಳಿವು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ (BJP National President JP Nadda) ಅವರನ್ನು ಭೇಟಿ ಮಾಡಿ ತಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ದೂರು ನೀಡಿದ್ದಾರೆ. ರಾಜ್ಯ ಬಿಜೆಪಿಯ ನಾಯಕರು 'ಪಕ್ಷ ನಿಷ್ಠರ' ಹೆಸರಿನಲ್ಲಿ ಬೆಂಗಳೂರಿನ ಸರ್ಕಾರಿ ಬಂಗಲೆಯೊಂದರಲ್ಲಿ ಪದೇ ಪದೇ ಸಭೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ.

ಬಿಟ್ ಕಾಯನ್ ಹಗರಣ ಬಳಸಿಕೊಂಡು ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬಿಟ್ ಕಾಯನ್ ಹಗರಣ ಹೊರಬರಲು ಸ್ಚಪಕ್ಷೀಯರೇ ಕಾರಣ. ಬಿಟ್ ಕಾಯನ್ ಹಗರಣ ಹೆಚ್ಚು ಚರ್ಚೆಯಾಗಲು ಬಿಜೆಪಿ ನಾಯಕರೇ ಕಾರಣ. ಬಿಟ್ ಕಾಯನ್ ಹಗರಣದ ಬಗ್ಗೆ ಪ್ರತಿಪಕ್ಷಗಳಿಗೆ ಬಿಜೆಪಿ ನಾಯಕರೇ ಮಾಹಿತಿ ನೀಡುತ್ತಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿ ವಿಷಯವನ್ನು ಜೀವಂತವಾಗಿ ಇಟ್ಟಿದ್ದಾರೆ' ಎಂಬುದಾಗಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.