ಮತಪೂರ್ವ ಸಮೀಕ್ಷೆ ಅಬ್ಬರ 'ಜನಾದೇಶ'ದ ವಾಸ್ತವ; ಕಳೆದ 3 ಚುನಾವಣೆಗಳಿಂದ ಸಮೀಕ್ಷೆಗಳು ಹೇಳಿದ್ದೊಂದು, ಫಲಿತಾಂಶ ಬಂದಿದ್ದೊಂದು

ಮತಪೂರ್ವ ಸಮೀಕ್ಷೆ ಅಬ್ಬರ 'ಜನಾದೇಶ'ದ ವಾಸ್ತವ; ಕಳೆದ 3 ಚುನಾವಣೆಗಳಿಂದ ಸಮೀಕ್ಷೆಗಳು ಹೇಳಿದ್ದೊಂದು, ಫಲಿತಾಂಶ ಬಂದಿದ್ದೊಂದು

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಚುನಾವಣೆ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಖಾಸಗಿ ಸಂಸ್ಥೆಗಳು ನಡೆಸುವ ಸರ್ವೆಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಜನರಲ್ಲೂ ಸಹ ಕುತೂಹಲ. ಸಾಮಾನ್ಯವಾಗಿ ಚುನಾವಣಾ ಪೂರ್ವದಲ್ಲಿ ಅಭಿಪ್ರಾಯ ಹೆಕ್ಕುವ 'ಒಪೀನಿಯನ್ ಸರ್ವೆ', ಮತದಾನ ಮುಗಿದ ಬಳಿಕ 'ಎಕ್ಸಿಟ್ ಪೋಲ್' ಭರಾಟೆ ಅಥವಾ ಪ್ರಾಮುಖ್ಯತೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಿದೆ.

2023ನೇ ವಿಧಾನಸಭೆ ಚುನಾವಣೆಗೆ ಸಿದ್ಧತೆ ಶುರುವಾದಾಗಿನಿಂದಲೇ 'ಒಪೀನಿಯನ್ ಸರ್ವೆ' ಕೂಡ ನಡೆಯುತ್ತಲೇ ಇದೆ. ಪಕ್ಷಗಳ ಆಯಾ ಸಂದರ್ಭದ ಸಾಮರ್ಥ್ಯವನ್ನು ಜನರ ಮುಂದಿಡುವ ಪ್ರಯತ್ನ ನಡೆದಿವೆ. ಈ ಹಿಂದೆ ರಾಜ್ಯದಲ್ಲಿ ನಡೆದಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನಡೆದಿರುವ 'ಒಪೀನಿಯನ್ ಸರ್ವೆ' ನಂತರದ 'ಎಕ್ಸಿಟ್ ಪೋಲ್'ಗಳ ವರದಿಯನ್ನು ವಿಶ್ಲೇಷಿಸುವುದಾದರೆ, ಜನರ ಮೂಡ್ ಚುನಾವಣೆಯ ಹೊತ್ತಲ್ಲಿ ಯಾವ ರೀತಿ ಬದಲಾಗುತ್ತದೆ ಎಂಬ ಚಿತ್ರಣ ದೊರೆಯುತ್ತದೆ.

ವಿಧಾನಸಭೆ ಕ್ಷೇತ್ರವಾರು ಅಭ್ಯರ್ಥಿಗಳು ಅಂತಿಮಗೊಳ್ಳುವ ಮುನ್ನ ನಡೆಯುವ ಸಮೀಕ್ಷೆಗಳು ಜನರ ಅಭಿಪ್ರಾಯದ ಒಂದು ತೆಳು ಎಳೆಯನ್ನು ಕಟ್ಟಿಕೊಡಲಷ್ಟೇ ಸಾಧ್ಯ.

ಸಣ್ಣ ಪ್ರಮಾಣದಲ್ಲಿ ಹಾಗೂ ಕೆಲವು ಪ್ರಮಾಣದಲ್ಲಿ ಜನರಿಂದ ಅಭಿಪ್ರಾಯ ಪಡೆಯುವ ಕಾರಣ ನಿಖರತೆ ಅಷ್ಟಾಗಿ ಇರುವುದಿಲ್ಲ. ಸರ್ವೆ ನಡೆಸುವ ಸಂದರ್ಭದಲ್ಲಿನ ರಾಜಕೀಯ ಆಗುಹೋಗು, ಸರ್ಕಾರದ ತೀರ್ವನಗಳು ಪರಿಣಾಮ ಬೀರಬಹುದು. ಅಂತಿಮವಾಗಿ ಸ್ಪರ್ಧಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಅಬ್ಬರ ವಾಸ್ತವ ಚಿತ್ರಣವನ್ನು ಏರುಪೇರು ಮಾಡಬಲ್ಲವು.

2013ರ ಲೆಕ್ಕಾಚಾರ: 2013ರ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಸರ್ವೆಗಳಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲಿದೆ ಎಂದು ಅಭಿಪ್ರಾಯ ಬಂದಿತ್ತು. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ, ಬಿಜೆಪಿಯ ಒಡಕು ಕಾಂಗ್ರೆಸ್​ಗೆ ಲಾಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜನಾಭಿಪ್ರಾಯದಂತೆ ಫಲಿತಾಂಶ ಕೂಡ ಬಂದಿತು. ಸಮೀಕ್ಷೆಗಳು ಬಹುತೇಕ ಸರಿಯಾಗಿದ್ದವು. ಪೋಲ್ ಆಫ್ ಪೋಲ್​ನಲ್ಲಿ (ಎಲ್ಲ ಸಮೀಕ್ಷೆಗಳ ಒಟ್ಟು ಸಾರ) 118-125ರವರೆಗೆ ಕಾಂಗ್ರೆಸ್ ಪಡೆಯಲಿದೆ ಎಂದು ಬಂದಿತ್ತು, ಕಾಂಗ್ರೆಸ್ 122 ಸ್ಥಾನ ಗಳಿಸಿತು. ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6 ಹಾಗೂ ಇತರರು 16 ಕಡೆ ಆರಿಸಿ ಬಂದಿದ್ದರು. ಕೆಜೆಪಿ ಬಿಜೆಪಿಯ ಮಗ್ಗಲು ಮುರಿದಿತ್ತು.

ಒಂದು ಉದಾಹರಣೆಗೆ ಅಂದು ತೆಹೆಲ್ಕಾ ಮತ್ತು ಸಿ-ವೋಟರ್ ನಡೆಸಿದ್ದ ಜಂಟಿ ಸಮೀಕ್ಷೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 55, ಜೆಡಿಎಸ್ 34, ಕೆಜೆಪಿ 11, ಇತರರು 9 ಸ್ಥಾನ ಗಳಿಸಬಹುದೆಂದು ಅಂದಾಜಿಸಿತ್ತು.

ಚುನಾವಣೆ ಪೂರ್ವದಲ್ಲಿ 15 ಸಮೀಕ್ಷೆಗಳು ನಡೆದಿದ್ದವು. ಅದರ ಸಾರ (ಪೋಲ್ ಆಫ್ ಪೋಲ್) ಬಿಜೆಪಿ 87, ಕಾಂಗ್ರೆಸ್ 96, ಜೆಡಿಎಸ್ 36 ಹಾಗೂ ಇತರರು 05 ಕಡೆ ಗೆಲ್ಲಬಹುದೆಂದು ಅಂದಾಜಿಸಿದ್ದವು. ಮತದಾನದ ಬಳಿಕ ನಡೆದ ಏಳು ಎಕ್ಸಿಟ್ ಪೋಲ್​ನಲ್ಲಿ (ಸರಾಸರಿ) ಬಿಜೆಪಿ 101 ಸ್ಥಾನ ಗಳಿಸಬಹುದೆಂದು ಅಂದಾಜಿಸಿದ್ದವು. ಟೈಮ್ಸ್​ನೌ ಮಾತ್ರ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದೇ ಹೇಳಿತ್ತು. ಇಂಡಿಯಾ ಟುಡೇ ಮಾತ್ರ ಬಿಜೆಪಿಗೆ 85 ಸ್ಥಾನ ನೀಡಿದ್ದರೆ, ಕಾಂಗ್ರೆಸ್​ಗೆ 111 ಸ್ಥಾನ ನೀಡಿ ಸರಳ ಬಹುಮತಕ್ಕೆ ಕೆಲವೇ ಸ್ಥಾನ ಕೊರತೆಯಾಗಬಹುದು ಎಂದು ಹೇಳಿತ್ತು. ಆದರೆ, ನಡೆದಿದ್ದೇ ಬೇರೆ. ಬಿಜೆಪಿ 104 ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್ 78, ಜೆಡಿಎಸ್ 37 ಸ್ಥಾನ ಗಳಿಸಿತು. ಚುನಾವಣೆ ಪೂರ್ವದ ಜನರ ಮನಸ್ಥಿತಿಯಲ್ಲಿ ಬಿಜೆಪಿಗೆ ಅಧಿಕಾರ ಇಲ್ಲ ಎಂದೇ ಸರ್ವೆಗಳು ಹೇಳಿದ್ದವು. ಎಕ್ಸಿಟ್ ಪೋಲ್​ನಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಅತಂತ್ರ ಸ್ಥಿತಿಯ ಸುಳಿವು ನೀಡಿದ್ದವು.

ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಆರು ಸಂಸ್ಥೆಗಳು ಜನರ ಅಭಿಪ್ರಾಯ ನೀಡಿವೆ. ಆರನ್ನೂ ಒಟ್ಟಾಗಿ ಪರಿಗಣಿಸಿದರೆ ಅತಂತ್ರ ವಿಧಾನಸಭೆ ನಿರ್ವಣವಾಗುವ ಲಕ್ಷಣ ಕಾಣಿಸಿದೆ. ಕಾಂಗ್ರೆಸ್ 94ರಿಂದ 103 ಸ್ಥಾನ ಗಳಿಸಬಹುದು, ಬಿಜೆಪಿ 89ರಿಂದ 98 ಸ್ಥಾನಗಳ ವರೆಗೂ ಗಳಿಸಬಹುದೆಂದು ಪೋಲ್ ಆಫ್ ಪೋಲ್ ಫಲಿತಾಂಶ ಬಂದಿದೆ. ಜೆಡಿಎಸ್ 25ರಿಂದ 34 ಸ್ಥಾನಗಳ ವರೆಗೂ ಗಳಿಸಬಹುದೆಂದು ಅಂದಾಜಿಸಲಾಗಿದೆ.

ಈ ಐದು ಸಮೀಕ್ಷೆಗಳಲ್ಲಿ ಎರಡು ಸಂಸ್ಥೆಗಳು ಕಾಂಗ್ರೆಸ್​ಗೆ ಸರಳ ಬಹುಮತ ಬರುವ ಅಂದಾಜು ಮಾಡಿದ್ದರೆ, ಉಳಿದ ಎರಡು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗುವ ಸುಳಿವು ನೀಡಿವೆ. ಒಂದು ಸಮೀಕ್ಷೆ ಎರಡೂ ಪಕ್ಷಕ್ಕೆ ಸಮಬಲ ನೀಡಿದ್ದು, ಜೆಡಿಎಸ್ ಸಾಧನೆ 40ಕ್ಕಿಂತ ಹೆಚ್ಚು ಸ್ಥಾನ ಆಗಿರಲಿದೆ ಎಂದು ಲೆಕ್ಕ ಹಾಕಿದೆ.