ಹತ್ತಾರು ವರ್ಷಗಳಿಂದ ಆಯೋಗದಲ್ಲಿ ಬೇರು ಬಿಟ್ಟಿರುವ ಸಿಬ್ಬಂದಿಗೆ ಸರ್ಕಾರ ಶಾಕ್..!
ಬೆಂಗಳೂರು : ಹತ್ತಾರು ವರ್ಷಗಳಿಂದ ಕರ್ನಾಟಕ ಲೋಕಸೇವಾ ಆಯೋಗದಲ್ಲಿಯೇ ತಳವೂರಿರುವ ಸಿಬ್ಬಂದಿಯ ಬದಲಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗುವ ಕಾಲ ಬಂದಿದೆ. ಅದರಂತೆ ಕರ್ನಾಟಕ ಲೋಕಸೇವಾ ಆಯೋಗದ ಸಿಬ್ಬಂದಿಯನ್ನು ಎರಡು ವರ್ಷಕ್ಕೊಮ್ಮೆ ಬದಲಾವಣೆ ಮಾಡಿ ಹೊಸ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಅಗತ್ಯ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ.
ಪರೀಕ್ಷಾ ವಿಧಾನ, ಅಂಕಗಳ ನಿಗದಿ ಸೇರಿದಂತೆ ಆಯೋಗದ ಸುಧಾರಣೆಗಾಗಿ ಕಾಲ ಕಾಲಕ್ಕೆ ಹೋಟಾ ಸಮಿತಿಯ ಬಹುತೇಕ ಶಿಫಾರಸುಗಳನ್ನು ಒಪ್ಪಿ ಅದನ್ನು ಜಾರಿಗೊಳಿಸಲು ನಿರ್ಧರಿಸಿತ್ತು. ಅವುಗಳಲ್ಲಿ ಸಿಬ್ಬಂದಿಗಳ ಬದಲಾವಣೆಯೂ ಸಹ ಒಂದು. ಅದನ್ನು ಅನುಷ್ಠಾನಗೊಳಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗುತ್ತಿದೆ..
ಸಿಬ್ಬಂದಿಗಳೇ ಶಾಮೀಲು: ಆಯೋಗದ ಅಕ್ರಮಗಳು ಮತ್ತು ನೇಮಕ ವಿಳಂಬದಲ್ಲಿ ಅಲ್ಲಿನ ಸಿಬ್ಬಂದಿಯ ಪಾತ್ರವೂ ಮುಖ್ಯವಾಗಿದೆ. ಆದರೆ ಹತ್ತಾರು ವರ್ಷಗಳಿಂದ ಆಯೋಗದಲ್ಲಿ ಬೇರು ಬಿಟ್ಟಿರುವ ಸಿಬ್ಬಂದಿ, ತಮ್ಮನ್ನು ಯಾರೂ ಅಲ್ಲಾಡಿಸಲಾಗದು ಎಂದು ಅಕ್ರಮಗಳನ್ನೇ ದಂಧೆ ಮಾಡಿಕೊಂಡಿದ್ದರು,
ಕಳೆದ ವರ್ಷ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಆಯೋಗದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು ಆಯೋಗ ತಕ್ಷಣವೇ ಅವರನ್ನು ಅಮಾನತುಗೊಳಿಸಿ ನಂತರ ಅವರ ವಿರುದ್ಧ ಕಾನೂನು ಪ್ರಕ್ರಿಯೆ ನಡೆಸಿತ್ತು.