ಸೈನಿಕರೊಂದಿಗೆ ಸಮಯ ಕಳೆದ ವಿಜಯ್ ದೇವರಕೊಂಡ; ಮುಂದಿನ ಸಿನಿಮಾದ ಮುನ್ಸೂಚನೆ ಎಂದ ಅಭಿಮಾನಿಗಳು

ನವದೆಹಲಿ: ಅರ್ಜುನ್ ರೆಡ್ಡಿ, ಗೀತಗೋವಿದಂನಂತಹ ಹಿಟ್ ಸಿನಿಮಾಗಳನ್ನು ನೀಡಿದ ವಿಜಯ್ ದೇವರಕೊಂಡ ದಕ್ಷಿಣ ಭಾರತದ ಬಹುಬೇಡಿಕೆಯ ನಟ. ವಿಜಯ್ ಅತ್ಯಂತ ಕಡಿಮೆ ಸಮಯದಲ್ಲೇ ತನ್ನ ಅತ್ಯದ್ಭುತ ನಟನೆ ಹಾಗೂ ತನ್ನ ಲುಕ್ನಿಂದ ಭಾರತೀಯ ಚಲನಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದಾರೆ.
ಇತ್ತೀಚೆಗೆ ವಿಜಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಸೈನಿಕರೊಂದಿಗಿನ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ವಿಜಯ್ ಒಂದರ ಹಿಂದೆ ಮತ್ತೊಂದರಂತೆ ನಿರಂತರವಾಗಿ ಶೂಟ್ ಮಾಡುವ ದೃಶ್ಯವಿದೆ. ಇದಲ್ಲದೇ ನಟನ ಸಹಾಯಕ್ಕೆ ಸೈನಿಕರು ನೆರವಾಗಿದ್ದಾರೆ. ಇದಕ್ಕೂ ಮುಂಚೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ನಟ ಫೋಟೋವೊಂದನ್ನು ಹಾಕಿದ್ದರು. ಇದೀಗ ವಿಡಿಯೋ ಹಾಕಿ ಅದಕ್ಕೆ 'ಈ ದೀಪಾವಳಿ, ಗನ್ಸ್, ಗನ್ಸ್, ಗನ್ಸ್. ರಾತ್ರಿ ಗಸ್ತು, ಆಟಗಳು, ಹಾಡುಗಳು, ಡಾನ್ಸ್, ಬೋಟ್ ರೇಸ್, ಬದುಕುಳಿಯುವ ಕಸರತ್ತುಗಳು. ಉತ್ತಮ ನೆನಪುಗಳು. #ಜೈಹಿಂದ್ #ಜೈಜವಾನ್' ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಜತೆ ವಿಜಯ್ ನಟನೆಯ ಲೈಗರ್ ಸಿನಿಮಾ ದೊಡ್ಡ ಮಟ್ಟದ ಪ್ರಚಾರ ಮಾಡಿದ್ದರೂ, ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಾಣದೇ ನೆಲಕಚ್ಚಿತ್ತು. ಅದರ ನಂತರ ವಿಜಯ್ ಕೆಲವು ದಿನಗಳ ಕಾಲ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಈ ನಟನ ಕೈಯಲ್ಲಿ ಇನ್ನೂ ಹಲವು ಪ್ರಾಜೆಕ್ಟ್ಗಳಿದ್ದು, ನಟಿ ಸಮಂತಾ ಜತೆ ರೋಮ್ಯಾಂಟಿಕ್ ಸಿನಿಮಾ ಖುಷಿ ಹಾಗೂ ಪೂಜಾ ಹೆಗ್ಡೆ ಜತೆಗಿನ ಆಕ್ಷನ್ ಸಿನಿಮಾ ಜನಗಣಮನ ಲಿಸ್ಟ್ನಲ್ಲಿದೆ.