ಸುಪ್ರೀಂ ಆದೇಶವನ್ನು ಲೆ.ಗವರ್ನರ್ ಪಾಲಿಸಲೇಬೇಕು: ಕಡತವನ್ನು ವಾಪಸ್ ಕಳುಹಿಸಿದ ಆಪ್ ಸರಕಾರ

ಹೊಸದಿಲ್ಲಿ,: ಅರವಿಂದ ಕೇಜ್ರಿವಾಲ್(Arvind Kejriwal) ನೇತೃತ್ವದ ದಿಲ್ಲಿ ಸರಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ(V.K Saxena) ನಡುವಿನ ಕಚ್ಚಾಟವು ಶುಕ್ರವಾರ ಹೊಸ ತಿರುವನ್ನು ಪಡೆದುಕೊಂಡಿದೆ.
ಶಿಕ್ಷಕರ ತರಬೇತಿಗೆ ಲ.ಗವರ್ನರ್ ಅಡ್ಡಿಯಾಗಬಾರದು. ಅವರು ತಕ್ಷಣ ಪ್ರಸ್ತಾವಕ್ಕೆ ಅನುಮತಿ ನೀಡಬೇಕು. ಲೆ.ಗವರ್ನರ್ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕು. ನ್ಯಾಯಾಲಯದ ಪ್ರಕಾರ ಅವರು ದಿಲ್ಲಿ ಸರಕಾರದ ಎಲ್ಲ ಕಡತಗಳನ್ನು ಕೇಳುವಂತಿಲ್ಲ ಎಂದು ಆಪ್ ಸರಕಾರವು ತಿಳಿಸಿದೆ. ಸಕ್ಸೇನಾ ಈ ಮೊದಲು ಪ್ರಸ್ತಾವವನ್ನು ವಾಪಸ್ ಕಳುಹಿಸಿದ್ದರು. ತನ್ನ ಕುರಿತು 'ಗಣನೀಯವಾಗಿ ತಪ್ಪುದಾರಿಗೆ ಎಳೆಯುವ,ಸುಳ್ಳು ಮತ್ತು ಅವಹೇಳನಕಾರಿ 'ಹೇಳಿಕೆಗಳಿಗಾಗಿ ಸಕ್ಸೇನಾ ಕೇಜ್ರಿವಾಲ್ರನ್ನು ಖಂಡಿಸಿ ಪತ್ರ ಬರೆದ ಬಳಿಕ ಆಪ್ ಸರಕಾರವು ಕಡತವನ್ನು ಅವರಿಗೆ ಮರುರವಾನಿಸಿದೆ.
ತರಬೇತಿಗಾಗಿ ಫಿನ್ಲಂಡ್ಗೆ ಶಿಕ್ಷಕರ ಭೇಟಿಯನ್ನು ಲೆ.ಗವರ್ನರ್ ತಡೆಹಿಡಿದಿದ್ದಾರೆ ಮತ್ತು ಈ ವಾರದ ಆರಂಭದಲ್ಲಿ ಪ್ರತಿಭಟಿಸಲು ತನ್ನ ನಿವಾಸಕ್ಕೆ ಜಾಥಾ ನಡೆಸಿದ್ದ ಆಪ್ ಶಾಸಕರನ್ನು ಭೇಟಿಯಾಗಲು ಅವರು ನಿರಾಕರಿಸಿದ್ದರು ಎಂಬ ಕೇಜ್ರಿವಾಲ್ ಆರೋಪದ ನಡುವೆಯೇ ಅವರ ಮತ್ತು ಸಕ್ಸೇನಾ ಮಧ್ಯೆ ವಾಗ್ಯುದ್ಧ ನಡೆದಿದೆ.
ತರಬೇತಿಗಾಗಿ ಫಿನ್ಲಂಡ್ಗೆ ಶಿಕ್ಷಕರ ಭೇಟಿಯನ್ನು ತಾನೆಂದಿಗೂ ತಿರಸ್ಕರಿಸಿಲ್ಲ,ಆದರೆ ಹೆಚ್ಚು ಮಿತವ್ಯಯಕಾರಿ ಪರ್ಯಾಯದ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದೆ ಎಂದು ಸಕ್ಸೇನಾ ಸಮರ್ಥಿಸಿಕೊಂಡಿದ್ದಾರೆ.