ಸಿಡಿ ಬಿಡುಗಡೆ ಮಾಡಲಿ,ಪ್ರದರ್ಶನ ಮಾಡಿಸುತ್ತೇನೆ: ಮುನಿರತ್ನ

ಬೆಂಗಳೂರು: ಸಿಡಿ ಇದ್ದರೆ ಬಿಡುಗಡೆ ಮಾಡಲಿ. ನಾನೇ 70 ಎಂಎಂ ಸ್ಕ್ರೀನ್ ಹಾಕಿ ವ್ಯವಸ್ಥೆ ಮಾಡಿಸುತ್ತೇನೆಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು 12 ಜನ ಜತೆಯಲ್ಲೇ ಇದ್ದೆವು. ಕುಮಾರಸ್ವಾಮಿ ನಿರ್ಮಾಪಕರು, ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಖಾಲಿ ಬುಟ್ಟಿ ಇಟ್ಟುಕೊಂಡು ಇರುತ್ತಾರೆ. ಹಾವಿದೆ, ಹಾವಿದೆ ಎನ್ನುತ್ತಾರೆ. ಅದರಲ್ಲಿ ಹಾವಲ್ಲ, ಹಾವು ರಾಣಿ ಕೂಡ ಇಲ್ಲ. ಆ ಬುಟ್ಟಿ ತೆಗೆದು ಬಿಡಿ, ಗೊತ್ತಾಗಲಿ ಏನಾದರೂ ಇದ್ದರೆ ಬಿಡುಗಡೆ ಮಾಡಿ, ಖಾಲಿ ಡಬ್ಬ ಇಟ್ಕೊಂಡು ಅಲ್ಲಾಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
12 ಜನ ಬಾಂಬೆ ಫ್ರೆಂಡ್ಸ್‌ಗಳ ಅಶ್ಲೀಲ ಚಿತ್ರಗಳಿದ್ದರೆ ರಾಜಕೀಯ ಬಿಟ್ಟು ಬಿಡುತ್ತೇವೆ. ನಾನಂತೂ ಬಾಂಬೆಗೆ ಹೋಗಿರಲಿಲ್ಲ, ಕುರುಕ್ಷೇತ್ರ ಸಿನೆಮಾಗಾಗಿ ಚೆನ್ನೈಗೆ ಹೋಗಿದ್ದೆ. ನನ್ನ ಬಾಂಬೆ ಫ್ರೆಂಡ್ಸ್ ಮೇಲಿನ ನಂಬಿಕೆ ಮೇಲೆ ನಾನು ರಾಜಕೀಯ ಬಿಡುತ್ತೇನೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ಯಾರು, ಆತನ ವೃತ್ತಿ ಏನೋ ನನಗೆ ಗೊತ್ತಿಲ್ಲ. ನಾನು ಕೋರ್ಟ್‌ನಲ್ಲೂ ತಡೆಯಾಜ್ಞೆ ತಂದಿಲ್ಲ. ಸ್ಯಾಂಪಲ್ ಇದೆ, ಸ್ಯಾಂಪಲ್ ಇದೆ ಅಂತಾರೆ. ಸ್ಯಾಂಪಲ್ ನೋಡೋಕೆ ಅದೇನು ಸ್ವೀಟ್ ಅಂಗಡಿಯಾ ಎಂದು ಪ್ರಶ್ನಿಸಿದರು.
ದಾಖಲೆ ಇಲ್ಲದೆ ಮಾತಾಡುವವರು ಎಚ್‌ಡಿಕೆ ಅಲ್ಲ
ಬೆಂಗಳೂರು: ದಾಖಲೆಗಳಿಲ್ಲದೆ ಮಾತಾಡುವುದು ಕುಮಾರಸ್ವಾಮಿ ಅವರ ಜಾಯಮಾನವೇ ಅಲ್ಲ. ಸ್ಯಾಂಟ್ರೋ ರವಿ ಯಾರು ಅಂತ ಗೊತ್ತೇ ಇಲ್ಲ ಎಂದ ನಿಮ್ಮ ಸಚಿವರನ್ನು ಸಮರ್ಥಿಸಲು ಈಗ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ ಎಂದು ಜೆಡಿಎಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಈ ಸ್ಯಾಂಟ್ರೋ ರವಿಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸಕ್ಕೆ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದು ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದು ಹೇಳಿದೆ. ಸ್ಯಾಂಟ್ರೋ ರವಿಯೊಂದಿಗೆ ನಿಮ್ಮ ಸಚಿವರಿಗಿರುವ ಸಂಬಂಧವೇನು. ಉನ್ನತ ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿ, ವರ್ಗಾವಣೆ ಕೆಲಸ ಮಾಡಿಸುತ್ತೇನೆ ಎನ್ನುವ ಈ ಡೀಲ್ ಗಿರಾಕಿಯ ವ್ಯವಹಾರಕ್ಕೆ ಸಾಥ್ ನೀಡಿದವರು ಯಾರು ಎಂದು ಪ್ರಶ್ನಿಸಿದೆ.
ಸ್ಯಾಂಟ್ರೊ ರವಿಯ ಆಡಿಯೊಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರಿಚಯವೇ ಇಲ್ಲವೆಂದ ಮೇಲೆ ಆತನಿಗೆ ಇಡೀ ರಾಜ್ಯ ಸರಕಾರ ತನ್ನ ಜೇಬಲ್ಲಿದೆ ಎಂದು ಮಾತನಾಡುವ ಅಧಿಕಾರ ಕೊಟ್ಟವರು ಯಾರು? ಕಮಿಷನ್ ದಂಧೆಗಾಗಿ ಇಂತಹ ಎಷ್ಟು ಅಯೋಗ್ಯರನ್ನು ಸಾಕುತ್ತಾ ಇದ್ದೀರಿ ಎಂದು ತಿರುಗೇಟು ನೀಡಿದೆ.