ಬ್ರೇಕಿಂಗ್ : ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ ಪರಿಷ್ಕೃತ ವಿದ್ಯುತ್ ದರ ವಾಪಸ್.?
ಬೆಂಗಳೂರು,ಅ.3- ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ ರಾಜ್ಯ ಸರ್ಕಾರ ಮೂರು ದಿನಗಳ ಹಿಂದೆಯಷ್ಟೇ ಪರಿಷ್ಕರಣೆ ಮಾಡಿದ್ದ ವಿದ್ಯುತ್ ದರವನ್ನು ಹಿಂಪಡೆಯಲು ತೀರ್ಮಾನಿಸಿದೆ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು, ವಿದ್ಯುತ್ ದರ ಪರಿಷ್ಕರಣೆಯಿಂದಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಕಾರ ಪರಿಷ್ಕøತ ದರವನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ದಸರಾ ಹಬ್ಬದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಇಂಧನ ಸಚಿವ ಸುನೀಲ್‍ಕುಮಾರ್ ಅವರು ಚರ್ಚಿಸಿ ಪರಿಷ್ಕøತ ದರವನ್ನು ಕೈಬಿಡಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಈ ಬಗ್ಗೆ ಈಗಾಗಲೇ ಸುಳಿವು ಕೊಟ್ಟಿರುವ ಅವರು, ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಒಂದು ಕಡೆ ಅಗತ್ಯವಸ್ತುಗಳ ಬೆಲೆ ಏರಿಕೆ, ಮತ್ತೊಂದು ಕಡೆ ವಿದ್ಯುತ್ ದರ ಏರಿಕೆಯಿಂದಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಹಿಂಪಡೆಯದಿದ್ದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದರು.
ಇದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಕೂಡ ದನಿಗೂಡಿಸಿದ್ದವು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿಪಕ್ಷಗಳು ಇದನ್ನು ಅಸ್ತ್ರವಾಗಿಸಿಕೊಂಡರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕ ಸರ್ಕಾರಕ್ಕಿದೆ.
ಹೀಗಾಗಿ ಪರಿಷ್ಕøತ ದರವನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳ ಕೋರಿಕೆಯಂತೆ ಪ್ರತಿ ಯೂನಿಟ್‍ಗೆ 23ರಿಂದ 43 ಪೈಸೆ ಬೆಲೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿತ್ತು.
ನೂತನ ದರದಂತೆ ಪ್ರತಿ ಯೂನಿಟ್‍ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 24 ಪೈಸೆ, ಸೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ 32 ಪೈಸೆ ಹಾಗೂ ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ 35 ಪೈಸೆಗೆ ಏರಿಕೆಯಾಗಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಮನೆಗೆ 500 ರೂ. ಇದ್ದರೆ 40 ರೂ. ಹೆಚ್ಚಳ ಮಾಡಿದ್ದರೆ, 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ 1,080 ರೂ. ಏರಿಕೆಯಾಗುವುದಾಗಿ ಹೇಳಿತ್ತು.
ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ಕಂಪನಿಗಳು ನಷ್ಟದಲ್ಲಿದ್ದು ಇದನ್ನು ಸರಿದೂಗಿಸಲು ದರ ಹೆಚ್ಚಳ ಮಾಡಬೇಕೆಂದು ಕೆಇಆರ್‍ಸಿಗೆ ಮನವಿ ಮಾಡಿಕೊಂಡಿತ್ತು. ಇದನ್ನು ವಿದ್ಯುತ್ ಕಂಪನಿಗಳ ಕೋರಿಕೆಯಂತೆ ಕೆಇಆರ್‍ಸಿ ಆಯಾ ವ್ಯಾಪ್ತಿಯ ಪರಿಸ್ಥಿತಿಗನುಗುಣವಾಗಿ 23ರಿಂದ 43 ಪೈಸೆಯನ್ನು ಪ್ರತಿ ಯೂನಿಟ್‍ಗೆ ಹೆಚ್ಚಳ ಮಾಡಿತ್ತು.
2022 ಜೂನ್‍ನಲ್ಲಿ ಪ್ರತಿ ಯೂನಿಟ್‍ಗೆ 31 ಪೈಸೆ ಏರಿಕೆ ಮಾಡಲಾಗಿತ್ತು. ಇದಕ್ಕೆ ಇಂಧನ ಹೊಂದಾಣಿಕೆ ಶುಲ್ಕ ಎಂದು ಕಾರಣವನ್ನು ನೀಡಿತ್ತು.