ಶ್ರೀಲಂಕಾ ವಿರುದ್ಧ ತಿರುಗಿಬಿದ್ದ ಕಿವೀಸ್: 2ನೇ ಟಿ20 ಪಂದ್ಯದಲ್ಲಿ ಲಂಕಾಗೆ ಆಘಾತ
ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಅಮೋಘ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟಿ20 ಪಂದ್ಯವನ್ನು ಸೂಪರ್ ಓವರ್ನಲ್ಲಿ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಈ ಪಂದ್ಯದಲ್ಲಿ ಅದ್ಭುತವಾಗಿ ತಿರುಗಿಬಿದ್ದಿದ್ದು ಲಂಕಾಗೆ ಯಾವ ಹಂತದಲ್ಲಿಯೂ ಅವಕಾಶ ನೀಡಲಿಲ್ಲ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಆತೊಥೆಯ ನ್ಯೂಜಿಲೆಂಡ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಶ್ರೀಲಂಕಾದ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸಿದ ಕಿವೀಸ್ ಬೌಲರ್ಗಳು ಲಂಕಾ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕುಸಲ ಪೆರೆರ ಹಾಗೂ ಧನಂಜಯ ಡಿಸಿಲ್ವ ಹೊರತುಪಡಿಸಿ ಉಳಿದ ಯಾವ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ 19 ಓವರ್ಗಳಲ್ಲಿ ಶ್ರೀಲಂಕಾ ಕೇವಲ 141 ರನ್ಗಳನ್ನು ಪೇರಿಸಿ ಆಲೌಟ್ ಆಗಿದೆ.
ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರ ಚಾದ್ ಬೌಸ್ 31 ರನ್ಗಳಿಸಿ ಔಟಾದ ಬಳಿಕ ಟಿಮ್ ಸೈಫರ್ಟ್ ಹಾಗೂ ನಾಯಕ ಟಾಮ್ ಲ್ಯಾಥಮ್ ವಿಕೆಟ್ ಕಳೆದುಕೊಳ್ಳದೆಯೇ ಲಂಕಾ ನೀಡಿದ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಸೈಫರ್ಟ್ ಕೇವಲ 43 ಎಸೆತಗಳಲ್ಲಿ 79 ರನ್ ಬಾರಿಸಿ ಸುಲಭ ಗೆಲುವಿಗೆ ಕಾರಣವಾದರು. ಇನ್ನೂ 32 ಎಸೆತಗಳು ಬಾಕಿಯಿರುವಂತೆಯೇ ನ್ಯೂಜಿಲೆಂಡ್ ತಂಡ 9 ವಿಕೆಟ್ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಕಿವೀಸ್ ಪರವಾಗಿ ಬೌಲಿಂಗ್ನಲ್ಲಿ ಆಡಂ ಮಿಲ್ನೆ ಭರ್ಜರಿ ಪ್ರದರ್ಶನ ನಿಡಿ ಮಿಂಚಿದ್ದಾರೆ. ಲಂಕಾ ದಾಂಡಿಗರಿಗೆ ಆಘಾತ ನೀಡಿದ ಮಿಲ್ನೆ 5 ವಿಕೆಟ್ ಕಬಳಿಸಿದರು. ಇನ್ನು ಬ್ಯಾಟಿಂಗ್ನಲ್ಲಿ ಸೈಫರ್ಟ್ ಅಬ್ಬರಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ಯಾವುದೇ ಅವಕಾಶವಿಲ್ಲದಂತೆ ಮಾಡಿದ್ದಾರೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ. ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಏಪ್ರಿಲ್ 8ರಂದು ಕ್ವೀನ್ಸ್ ಟೌಟ್ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ಆಡುವ ಬಳಗ: ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಆಡಮ್ ಮಿಲ್ನೆ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬೆನ್ ಲಿಸ್ಟರ್
ಬೆಂಚ್: ಮ್ಯಾಟ್ ಹೆನ್ರಿ, ವಿಲ್ ಯಂಗ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆ ಕೀಪರ್), ಕುಸಲ್ ಪೆರೆರಾ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಮಹೇಶ್ ತೀಕ್ಷಣ, ಪ್ರಮೋದ್ ಮದುಶನ್, ದಿಲ್ಶನ್ ಮಧುಶಂಕ, ಕಸುನ್ ರಜಿತ
ಬೆಂಚ್: ಚಾಮಿಕ ಕರುಣಾರತ್ನ, ಲಹಿರು ಕುಮಾರ, ಸದೀರ ಸಮರವಿಕ್ರಮ, ನುವಾನಿದು ಫೆರ್ನಾಂಡೋ, ದುನಿತ್ ವೆಲ್ಲಲಗೆ, ಮತೀಶ ಪತಿರಣ, ಲಸಿತ್ ಕ್ರೂಸ್ಪುಲ್ಲೆ