ವಿರಾಟ್ ಕೊಹ್ಲಿಯನ್ನು ತಡೆಯುವ ಪ್ರಯತ್ನ ಮಾಡಲಿದ್ದೇವೆ ಎಂದ ನ್ಯೂಜಿಲೆಂಡ್ ನಾಯಕ

ಭಾರತದ ವಿರುದ್ದ ವೈಟ್‌ಬಾಲ್ ಸರಣಿಗಾಗಿ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ನಿದ್ದೆಗೆಡಿಸಿರುವುದು ಸ್ಪಷ್ಟವಾಗಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಶತಕ ಸಿಡಿಸಿರುವ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧವೂ ಅಂಥಾದ್ದೇ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ ಬಳಿಕ ಅದ್ಭುತ ಲಯದಲ್ಲಿದ್ದು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಏಕದಿನ ಮಾದರಿಯಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಮೂರು ಶತಕ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ವರ್ಷಗಳ ಬಳಿಕ ಕಳೆದ ಬಾಂಗ್ಲಾದೇಶ ಪ್ರವಾಸದಲ್ಲಿ ಶತಕ ಸಿಡಿಸಿದ ಕೊಹ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಎರಡು ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಸರಣಿಯನ್ನು ಭಾರತ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.
ಏಕದಿನ ಸರಣಿಯ ಆರಂಭಕ್ಕೂ ಮುನ್ನಾದಿನ ಟಾಮ್ ಲ್ಯಾಥಮ್ ಹೈದರಾಬಾದ್‌ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಫಾರ್ಮ್ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. "ವಿರಾಟ್ ಕೊಹ್ಲಿ ಅದ್ಭುತ ಕ್ರಿಕೆಟ್ ಆಡುತ್ತಿದ್ದಾರೆ. ಚೆಂಡನ್ನು ಭರ್ಜರಿಯಾಗಿ ಬಾರಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಸೇರಿದಂತೆ ಉಳಿದ ಎಲ್ಲಾ ಆಟಗಾರರ ವಿರುದ್ಧವೂ ನಾವು ರಣತಂತ್ರವನ್ನು ಹೇಣೆಯಬೇಕು. ಇನ್ನು ವಿರಾಟ್ ಕೊಹ್ಲಿ ರನ್ ಗಳಿಸಲು ಕಷ್ಟ ಪಡುವಂತೆ ನಾವೆಲ್ಲಾ ಪ್ರಯತ್ನ ನಡೆಸಲಿದ್ದೇವೆ" ಎಂದಿದ್ದಾರೆ ಟಾಮ್ ಲ್ಯಾಥಮ್.
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಯಾವಾಗಲೂ ಉತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಸರಣಿಯಲ್ಲಿಯೂ ಕೊಹ್ಲಿಯಿಂದ ಮತ್ತೆ ಅಂಥಾದ್ದೇ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ. ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿರುವ 26 ಪಂದ್ಯಗಳಲ್ಲಿ 59.91 ಸರಾಸರಿಯನ್ನು ಹೊಂದಿದ್ದಯ 94.64 ಸ್ಟ್ರೈಕ್ ರೇಟ್‌ನಲ್ಲಿ 1378 ರನ್ ಗಳಿಸಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧ 5 ಶತಕ ಮತ್ತು 8 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇನ್ನು ಈ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್, ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ಆಟಗಾರರು ಇಲ್ಲದೆಯೇ ಕಣಕ್ಕಿಳಿಯಲಿದೆ. ಲ್ಯಾಥಮ್ ಈ ಸರಣಿಯಲ್ಲಿ ಕಿವೀಸ್ ಪಡೆಯನ್ನು ಮುನ್ನಡೆಸಲಿದ್ದು ಲೆಗ್ ಸ್ಪಿನ್ನರ್ ಇಶ್ ಸೋಧಿ ಒಂದು ಮೊದಲ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ ಎಂದು ಲ್ಯಾಥಮ್ ಮಾಹಿತಿ ನೀಡಿದ್ದಾರೆ.
ನ್ಯೂಜಿಲೆಂಡ್ ಸ್ಕ್ವಾಡ್ ಹೀಗಿದೆ: ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಲಾಕ್ ಫರ್ಗುಸನ್, ಬ್ಲೇರ್ ಟಿಕ್ನರ್, ಜಾಕೋಬ್ ಡಫಿ, ಡೌಗ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಹೆನ್ರಿ ಶಿಪ್ಲಿ
ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್