ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಸೆಮಿ ಲಾಕ್‍ಡೌನ್..!?

ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಸೆಮಿ ಲಾಕ್‍ಡೌನ್..!?

ಬೆಂಗಳೂರು,ಡಿ.7-ರಾಜ್ಯದಲ್ಲಿ ಕೊರೊನಾ ಸೋಂಕು ನಿಧಾನವಾಗಿ ಏರುಮುಖವಾಗುತ್ತಿರುವ ಕಾರಣ ಆತಂಕಗೊಂಡಿರುವ ರಾಜ್ಯ ಸರ್ಕಾರ ಕೆಲವು ಕಠಿಣ ನಿಬಂಧನೆಗಳನ್ನು ವಿಸಲು ತೀರ್ಮಾನಿಸಿದೆ.ಗುರುವಾರ ಸಚಿವ ಸಂಪುಟ ಸಭೆ ಹಾಗೂ ಶುಕ್ರವಾರ 20 ಕ್ಷೇತ್ರಗಳ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆ ನಡೆಯಲಿದೆ.

ಮತದಾನದ ಪ್ರಕ್ರಿಯೆ ಮುಗಿದ ನಂತರ ರಾಜ್ಯದಲ್ಲಿ ಸೆಮಿ ಲಾಕ್‍ಡೌನ್ ಮಾದರಿಯಲ್ಲಿ ನಿಬಂಧನೆ ಹಾಕಲು ಚಿಂತನೆ ನಡೆದಿದೆ.

ಧಾರವಾಡ, ಚಿಕ್ಕಮಗಳೂರು, ತುಮಕೂರು, ಮೈಸೂರು ಸೇರಿದಂತೆ ಮತ್ತಿತರ ಕಡೆ ನವೋದಯ ಶಾಲೆ, ವಸತಿ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸರ್ಕಾರ ಹೊಸ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆ.

ವಿಶೇಷವಾಗಿ ಕೋವಿಡ್ ಸೋಂಕು ಹೆಚ್ಚುತ್ತಿರುವ ರಾಜಧಾನಿ ಬೆಂಗಳೂರು, ತುಮಕೂರು, ಧಾರವಾಡ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ ಸೇರಿದಂತೆ ಹೈ ರಿಸ್ಕ್ ಇರುವ ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ ವಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿಗೆ ಹಿಂತಿರುಗಲಿದ್ದು, ನಾಳೆ ಔಪಚಾರಿಕವಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸುವರು.

ತಜ್ಞರು ನೀಡಿರುವ ಶಿಫಾರಸ್ಸಿನ ಆಧಾರದ ಮೇಲೆ ರಾಜ್ಯ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂಪುಟ ಸಭೆಯಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚಿಸಿದ ನಂತರ ಶನಿವಾರ ಇಲ್ಲವೇ ಭಾನುವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ನಿಯಮಗಳನ್ನು ಜಾರಿಗೊಳಿಸಲಿದೆ.

ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ.ಬಾರ್ ರೆಸ್ಟೋರೆಂಟ್, ಡಿಸ್ಕೊತೆಕ್, ಕ್ಲಬ್‍ಗಳು, ಪಬ್‍ಗಳು, ಖಾಸಗಿ ಕಚೇರಿಗಳು, ಹೋಟೆಲ್‍ಗಳು(ಪಾರ್ಸಲ್‍ಗೆ ಮಾತ್ರ ಅವಕಾಶ), ಮಾರುಕಟ್ಟೆ, ಐಟಿಬಿಟಿ ಕಂಪನಿಗಳು, ಮಾಲ್‍ಗಳು ಸೇರಿದಂತೆ ಜನಸಂದಣಿ ಇರುವ ಕಡೆ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಿದೆ.

ಇದು ಜಿಲ್ಲಾ ಕೇಂದ್ರಗಳಿಗೆ ಮಾತ್ರ ಅನ್ವಯವಾಗಲಿದ್ದು, ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ನಗರಪ್ರದೇಶಗಳಲ್ಲೇ ಸೋಂಕು ಹೆಚ್ಚುತ್ತಿರುವುದರಿಂದ ಸರ್ಕಾರ ವಿಯಿಲ್ಲದೆ ಈ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಕೆಲವು ಜಿಲ್ಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡುವಂತೆ ತಜ್ಞರು ಕೂಡ ಸರ್ಕಾರಕ್ಕೆ ಈ ಹಿಂದೆಯೇ ಶಿಫಾರಸ್ಸು ಮಾಡಿದ್ದರು. ಆದರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರಣಕ್ಕಾಗಿ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ನೈಟ್ ಕಫ್ರ್ಯೂ ಜಾರಿಯಾದರೂ ವಾಣಿಜ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗದ ರೀತಿಯಲ್ಲಿ ನಿಯಮಗಳನ್ನು ಜಾರಿ ಮಾಡಲಿದೆ. ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲೂ ಅಲ್ಲಿನ ಸರ್ಕಾರ ಸೆಮಿ ಲಾಕ್‍ಡೌನ್ ಜಾರಿಗೊಳಿಸಲು ಚಿಂತನೆ ನಡೆಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಇದೇ ಮಾದರಿಯನ್ನು ಅನುಸರಿಸಲಿವೆ ಎಂದು ಮೂಲಗಳು ತಿಳಿಸಿವೆ.