ವರಿಷ್ಠರ ಕಾಲಾವಕಾಶ ಸಿಕ್ಕರೆ ಇದೇ ವಾರ ದೆಹಲಿಗೆ ಹೋಗುವೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜನಸಂಕಲ್ಪ ಯಾತ್ರೆ ಮಧ್ಯೆ ಭೇಟಿಗೆ ಕಾಲಾವಕಾಶ ನೀಡಬೇಕು ಎಂದು ವರಿಷ್ಠರಿಗೆ ಕೇಳಿಕೊಂಡಿದ್ದು, ಕಾಲಾವಕಾಶ ನೀಡಿದರೆ ಇದೇ ವಾರ ದೆಹಲಿಗೆ ತೆರಳುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸಂಪುಟ ವಿಸ್ತರಣೆ ಸೇರಿ ಇನ್ನಿತರ ವಿಷಯಗಳ ಚರ್ಚೆಗಾಗಿ ದೆಹಲಿಗೆ ಹೋಗಬೇಕೆಂದಿರುವೆ.
ಮೀಸಲು ಹೆಚ್ಚಳ ಬೇಡಿಕೆಗಳ ಬಗ್ಗೆ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲಿ ಸ್ಪಷ್ಟಪಡಿಸಿರುವೆ. ಎಲ್ಲ ಸಮುದಾಯಗಳಿಗೆ ಮೀಸಲು ಹೆಚ್ಚಿಸಬೇಕೆಂಬ ಆಕಾಂಕ್ಷೆ ಇರುವುದು ಸಹಜ, ಅದಕ್ಕಾಗಿ ಮನವಿ ಸಲ್ಲಿಸುವುದು ತಪ್ಪೇನಲ್ಲ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ, ವಿವಿಧ ಸಮಿತಿಗಳು ವರದಿ ಸಲ್ಲಿಸಿದ ಬಳಿಕ ಚರ್ಚಿಸಿ ಕಾನೂನು ಪ್ರಕಾರ ಕ್ರಮವಹಿಸುವೆ ಎಂದು ಪುನರುಚ್ಚರಿಸಿದರು.
ವರದಿಗೆ ಸೂಚನೆ: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿರುವೆ. ಈ ವರದಿ ಬಂದ ನಂತರ ತಪ್ಪಿತಸ್ಥರು ಯಾರೇ ಇರಲಿ ಕ್ರಮಕೈಗೊಳ್ಳಲಾಗುವುದು. ವಿಷಯ ತಿಳಿದ ತಕ್ಷಣ ಬಿಬಿಎಂಪಿ ಆಯಕ್ತರಿಗೆ ಮಾತನಾಡಿ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ತಿಳಿಸಿರುವೆ. ಕೆಲವು ಕಡೆ ರಸ್ತೆ ಗುಂಡಿಗಳು ಮುಚ್ಚಿದ್ದರೂ ಮತ್ತೆ ಕಿತ್ತು ಹೋಗಿರುವುದು ಗಮನಕ್ಕೆ ಬಂದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.