ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣ
ಬೆಂಗಳೂರು ಏಪ್ರಿಲ್ 1: ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಸಿಹಿ ಸುದ್ದಿಯನ್ನು ಕೊಟ್ಟಿದೆ. ನೈಋತ್ಯ ರೈಲ್ವೆಯ ನಿರೀಕ್ಷೆಯಂತೆ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಳಿಸಿದೆ. ಹೀಗಾಗಿ ಇದೇ ತಿಂಗಳು 'ವಂದೇ ಭಾರತ್' ಅಥವಾ ಇತರೆ ಎಲೆಕ್ಟ್ರಿಕ್ ರೈಲುಗಳ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಬೆಂಗಳೂರು-ಹುಬ್ಬಳ್ಳಿಯ ಸುಮಾರು 469 ಕಿ.ಮೀ. ಉದ್ದದ ಈ ಮಾರ್ಗದ ಡಬ್ಲಿಂಗ್ (ಜೋಡಿ ಮಾರ್ಗ) ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 316 ಕಿಮೀನಷ್ಟು ತೋಳಹುಣಸೆವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನು ಬಾಕಿ ಇದ್ದ 153 ಕಿ.ಮೀ. ಕಾಮಗಾರಿಯೂ ಪೂರ್ಣಗೊಂಡಿದೆ. ಪೋಲ್ ಹಾಗೂ ವೈರಿಂಗ್ ಅಳವಡಿಕೆ, ಕಾಮಗಾರಿ ಕೂಡ ಪೂರ್ಣಗೊಂಡಿದ್ದು ಇದೇ ತಿಂಗಳು ಉದ್ಘಾಟನೆ ಮಾಡುವ ಗುರಿಯಿಂದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆ (SWR) ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ರೈಲ್ವೆ ಮಾರ್ಗದ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದೆ. ಎಸ್ಡಬ್ಲ್ಯೂಆರ್ನ ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಜೈಪಾಲ್ ಸಿಂಗ್ ಅವರು ನಿನ್ನೆ ದೇವರಗುಡ್ಡ ಮತ್ತು ಹುಬ್ಬಳ್ಳಿ ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣ
ಈ ವೇಳೆ ದೇವರಗುಡ್ಡ-ಹುಬ್ಬಳ್ಳಿ ನಡುವೆ ಇ-ಲೊಕೊ ಮೂಲಕ ವೇಗ ಪ್ರಯೋಗ ನಡೆಸಲಾಯಿತು. KJM WAG9HC ದೇವರಗುಡ್ಡ ಹುಬ್ಬಳ್ಳಿ ವಿಭಾಗದ ನಡುವೆ 100 Kmph ಪೂರ್ಣ ವಿಭಾಗೀಯ ವೇಗದಲ್ಲಿ ಚಲಾಯಿಸಲಾಯಿತು.
ದೇವರಗುಡ್ಡ-ಬೆಂಗಳೂರು ನಡುವಿನ ಮಾರ್ಗವನ್ನು ಈಗಾಗಲೇ ದ್ವಿಗುಣಗೊಳಿಸಲಾಗಿದೆ ಮತ್ತು ವಿದ್ಯುದ್ದೀಕರಿಸಲಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಲು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ರೈಲ್ವೆ ಮಾರ್ಗದ ದ್ವಿಗುಣ ಮತ್ತು ವಿದ್ಯುದ್ದೀಕರಣವು ನಿರ್ಣಾಯಕವಾಗಿತ್ತು. ಹೀಗಾಗಿ ರೈಲು ಸಂಚಾರಕ್ಕೆ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ.
ರೈಲು 18 ಎಂದೂ ಕರೆಯಲ್ಪಡುವ ವಂದೇ ಭಾರತ್ ಎಕ್ಸ್ಪ್ರೆಸ್ ಭಾರತೀಯ ರೈಲ್ವೇಗಳಿಂದ ನಿರ್ವಹಿಸಲ್ಪಡುವ ಅರೆ-ಹೈ-ಸ್ಪೀಡ್, ಇಂಟರ್ಸಿಟಿ, ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲು ಆಗಿದೆ. ರೈಲನ್ನು ಗಂಟೆಗೆ 160 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸಲು ಪರೀಕ್ಷಿಸಲಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸುಗಮವಾಗಿ ಓಡಿಸಲು ಸಹಾಯ ಮಾಡುತ್ತದೆ ಎಂದು ಬೆಂಗಳೂರು ಮತ್ತು ರೈಲ್ವೇ ವಿದ್ಯುದೀಕರಣದ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.
ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗ
ಮಾರ್ಗ ಮಧ್ಯೆ ಇರುವ ಟ್ರ್ಯಾಕ್ಷನ್ ಸಬ್ಸ್ಟೇಷನ್ಗಳಿಗೆ ಕೆಪಿಟಿಸಿಎಲ್ನಿಂದ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಿಮದ ಎಲೆಕ್ಟ್ರಿಕ್ ರೈಲು ಸಂಚರಿಸಲು ಸಾಧ್ಯವಾಗಲಿದೆ. ಸದ್ಯ ಈ ಕೆಲಸಗಳು ಪೂರ್ಣಗೊಂಡಿದ್ದು ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ 'ವಂದೇ ಭಾರತ್' ಪ್ರಯಾಣಿಸಲು ಸಿದ್ಧವಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
ಈ ಮಾರ್ಗದ ರೈಲ್ವೆ ಜೋಡಿ ಮಾರ್ಗ ಕಾಮಗಾರಿಗೆ 2015-16ರಲ್ಲಿಯೇ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿತ್ತು. ಇದಕ್ಕಾಗಿ ಸಂಪೂರ್ಣ ಕೇಂದ್ರವೇ 1954.21 ಕೋಟಿ ರು. ಬಿಡುಗಡೆ ಮಾಡಿತ್ತು. ಚಿಕ್ಕಬಾಣಾವರ-ಹುಬ್ಬಳ್ಳಿ ನಡುವಣ ಎಲೆಕ್ಟ್ರಿಫಿಕೇಶನ್ ಕಾಮಗಾರಿಗೆ 850 ಕೋಟಿ ರು. ಬಿಡುಗಡೆ ಆಗಿತ್ತು.
ಅಲ್ಲದೆ, ಕಳೆದ ಡಿಸೆಂಬರ್ನಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪೂರಕವಾಗಿ ವೇಗದ ಪರೀಕ್ಷೆಯನ್ನೂ ನಡೆಸಲಾಗಿದ್ದು, ಧಾರವಾಡದವರೆಗೆ ವಂದೇ ಭಾರತ್ ಸಂಚರಿಸುವುದು ನಿಶ್ಚಿತವಾಗಿದೆ. ಮಿನಿ ವಂದೇ ಭಾರತ್ ಕಲ್ಪನೆಯಲ್ಲಿ ಈ ರೈಲು ಇರಲಿದೆ ಎನ್ನಲಾಗಿದ್ದು, 5-6 ಗಂಟೆಗಳಲ್ಲಿ ಬೆಂಗಳೂರು-ಧಾರವಾಡ ತಲುಪಲು ಸಾಧ್ಯವಾಗಬಹುದು ಎನ್ನುವುದು ನೈಋುತ್ಯ ರೈಲ್ವೆ ಲೆಕ್ಕಾಚಾರ.
ಇದೇ ತಿಂಗಳು ಇಲ್ಲಿ ಎಲೆಕ್ಟ್ರಿಕಲ್ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಡಲು ನೈಋುತ್ಯ ರೈಲ್ವೆ ಪ್ರಯತ್ನಶೀಲವಾಗಿದೆ ಅಂತ ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.