ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ; ಮಗು ಸೇರಿ ಮೂವರು ಸಾವು, 9 ಮಂದಿಗೆ ಗಾಯ

ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ; ಮಗು ಸೇರಿ ಮೂವರು ಸಾವು, 9 ಮಂದಿಗೆ ಗಾಯ

ಕೋಝಿಕ್ಕೋಡ್: ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿರುವ ಘಟನೆ ಕೇರಳದ ಎಲತ್ತೂರ್ ರೈಲು ನಿಲ್ದಾಣದ ಬಳಿ ನಡೆದಿದೆ. ಘಟನೆಯಲ್ಲಿ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಭಾನುವಾರ ರಾತ್ರಿ 9.45 ರ ಸುಮಾರಿಗೆ, ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಇಲ್ಲಿನ ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಸಹ-ಪ್ರಯಾಣಿಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮವಾಗಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಘಟನೆ ನಡೆದ ಕೂಡಲೇ ಆರೋಪಿ ಪರಾರಿಯಾಗಿದ್ದು, ಪ್ರಯಾಣಿಕರು ತುರ್ತು ಸರಪಳಿ ಎಳೆದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರೈಲು ಕಣ್ಣೂರು ತಲುಪಿದಾಗ, ಘಟನೆಯ ನಂತರ ಮಹಿಳೆ ಮತ್ತು ಮಗು ಕಾಣೆಯಾಗಿದೆ ಎಂದು ಕೆಲವು ಪ್ರಯಾಣಿಕರು ದೂರಿದರು.

ನಾಪತ್ತೆಯಾದವರ ಸುದ್ದಿ ಹೊರಬಿದ್ದ ಕೂಡಲೇ ನಗರ ಪೊಲೀಸರು ಹಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಮತ್ತು ಮಗು ಮತ್ತು ಮಧ್ಯವಯಸ್ಕ ಪುರುಷ ಸೇರಿದಂತೆ ಮೂರು ಮೃತದೇಹಗಳು ಪತ್ತೆಯಾಗಿವೆ. ಬೆಂಕಿಯನ್ನು ನೋಡಿದ ನಂತರ ಅವರು ರೈಲಿನಿಂದ ಬಿದ್ದಿದ್ದಾರೆ ಅಥವಾ ಇಳಿಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಒಟ್ಟು ಒಂಬತ್ತು ಜನರನ್ನು ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.