ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು – ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ರೈತರು ರಾಸಾಯನಿಕ ರಸಗೊಬ್ಬರ ಬಳಕೆ ಬಿಟ್ಟು, ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಕೊಲ್ಹಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಸಮೀಪದ, ಅನುಭವ ಮಂಟಪ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ, “ಶ್ರೀಗಳ ನಡೆ-ರೈತರ ಕಡೆ” ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದುರಾಸೆಗೆ ಭೂಮಿ ತನ್ನ ಸತ್ವವನ್ನು ಕಳೆದುಕೊಂಡಿದೆ. ಇದು ಮುಂಬರುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಭೂತಾಯಿಯ ಒಡಲಿನಲ್ಲಿ ಎಲ್ಲವೂ ಇದೆ. ಆದರೆ, ಹಲವಾರು ರಾಸಾಯನಿಕ ಪದಾರ್ಥಗಳನ್ನು ಬಳಸುವ ಮೂಲಕ ನಾವು ಅದನ್ನು ಹಾಳು ಮಾಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಡಾ.ಜಗದೀಶ್ ಹಾರುಗೊಪ್ಪ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಶ್ರೀಗಳು, ಶ್ಯಾಂಡಿಲ್ಯ ಮಹಾಸ್ವಾಮಿಗಳು, ಅಶೋಕ ಕರವಿನಕೊಪ್ಪ ಗುರೂಜಿ, ಋಷಿಕೇಶ ಸ್ವಾಮೀಜಿ, ವೀರೇಶ್ವರ ಶ್ರೀಗಳು, ಕಮಲಾ ಗಣಾಚಾರಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.