ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಹಿಸುದ್ದಿ : `ಆಯುಷ್ಮತಿ ಕ್ಲಿನಿಕ್'ಗೆ ಚಾಲನೆ
ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮಹಿಳೆಯರಿಗೆ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗುತ್ತಿದೆ.
ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮಹಿಳಾ ಆರೋಗ್ಯ ಸೇವೆಗಳಿಗಾಗಿ ರಾಜ್ಯಾದ್ಯಂತ 128 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ.
ಮಹಿಳೆಯರಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು, ಹದಿಹರಿಯದ ಹೆಣ್ಣುಮಕ್ಕಳಿಗೆ ದೈಹಿಕ ಬದಲಾವಣೆ, ನೈರ್ಮಲ್ಯ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸುವುದು ಮತ್ತು ಆಪ್ತ ಸಮಾಲೋಚನೆ ನಡೆಸುವುದು. 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸುವುದು. ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫೆರಲ್ ಸೇವೆಗಳು ಲಭ್ಯವಿರುತ್ತದೆ..
ಆಯುಷ್ಮತಿ ಕ್ಲಿನಿಕ್ನಲ್ಲಿ ಸೋಮವಾರ ಪಿಜಿಷಿಯನ್(ಸಾಮಾನ್ಯ ರೋಗ ತಜ್ಞರು), ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರ ಚಿಕಿತ್ಸಕ ತಜ್ಞರು, ಗುರುವಾರ ಮಕ್ಕಳ ತಜ್ಞರು, ಶುಕ್ರವಾರ ಸ್ತ್ರೀ ರೋಗ ತಜ್ಞರು ಮತ್ತು ಶನಿವಾರ ಇತರ ತಜ್ಞರಲ್ಲಿ ಕಿವಿ, ಮೂಗು, ಗಂಟಲು ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ದಂತ ತಜ್ಞರು ಹಾಗೂ ಇತರ ಆರೋಗ್ಯ ತಜ್ಞರು ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಹಾಜರಿರುತ್ತಾರೆ. ನಗರ ವ್ಯಾಪ್ತಿಯ ಹಾಗೂ ಗ್ರಾಮೀಣ ವ್ಯಾಪ್ತಿಯ ಮಹಿಳೆಯರು ಈ ಕ್ಲಿನಿಕ್ನ ಸೇವೆ ಪಡೆಯಬಹುದು.