ರಾಜಾಜಿನಗರದಲ್ಲಿ ಎನ್ಪಿ ಎಸ್ ಶಾಲೆಗೆ ಬಾಂಬ್ ಇಮೇಲ್ ವಿಚಾರ; ತಮಾಷೆಗಾಗಿ ಈ ರೀತಿ ಕೃತ್ಯ ಎಸಗಿರುವುದಾಗಿ ಬಾಯಿಬಿಟ್ಟ ಬಾಲಕ
ಬೆಂಗಳೂರು: ರಾಜಾಜಿನಗರದಲ್ಲಿರುವ ಎನ್ಪಿ ಎಸ್ ಶಾಲೆಗೆ ಬಾಂಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಮೇಲ್ ಸಂದೇಶ ರವಾನಿಸಿರುವುದು ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಎಂಬುದು ಬಯಲಾಗಿದೆ. ಗೂಗಲ್ ನಲ್ಲಿ ಎನ್.ಪಿ.ಎಸ್ ಶಾಲೆಯ ಅಧಿಕೃತ ಇಮೇಲ್ ವಿಳಾಸ ಪಡೆದಿದ್ದ ವಿದ್ಯಾರ್ಥಿ, ತಮಾಷೆಗಾಗಿ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆನೂರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ರಾಜಾಜಿನಗರದ ಎನ್ಪಿಎಸ್ ಶಾಲೆಗೆ ಜನವರಿ 5 ರಂದು ರಾತ್ರಿ 8:30 ರ ಸುಮಾರಿಗೆ ಬಂದಿದ್ದ ಇಮೇಲ್ನಲ್ಲಿ 'ನನ್ನ ಬಳಿ ನಾಲ್ಕು ಜಿಲೇಟಿನ್ ಕಡ್ಡಿಗಳಿವೆ. ನಾಳೆ ಊಟದ ಸಮಯದಲ್ಲಿ ಬ್ಲಾಸ್ಟ್ ಮಾಡ್ತೀನಿ' ಎಂದು ಬರೆಯಲಾಗಿತ್ತು. ನಿನ್ನೆ ಬೆಳಗ್ಗೆ ಮೇಲ್ ಪರಿಶೀಲಿಸಿದ ಶಾಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಶಾಲಾ ಮಕ್ಕಳನ್ನ ತರಗತಿಯಿಂದ ಹೊರಗೆ ಕಳುಹಿಸಿ ತುರ್ತು ರಜೆ ನೀಡಿತ್ತು. ನಂತರ ಈ ಬಗ್ಗೆ ಬಸವೇಶ್ವರ ನಗರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿತ್ತು. ಮಾಹಿತಿ ಬರುತ್ತಿದ್ದಂತೆ ಕಾರ್ಯಪ್ರವೃತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಬಂದು ಶಾಲೆ ಪೂರ್ತಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ತಿಳಿದುಬಂದಿದೆ.