ಯಕ್ಷಗಾನದ ಭೀಷ್ಮ `ಬಲಿಪ ನಾರಾಯಣ ಭಾಗವತ' ಇನ್ನಿಲ್ಲ

ಯಕ್ಷಗಾನದ ಭೀಷ್ಮ `ಬಲಿಪ ನಾರಾಯಣ ಭಾಗವತ' ಇನ್ನಿಲ್ಲ

ಮಂಗಳೂರು : ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಭಾಗವತರಾದ ಬಲಿಪ ನಾರಾಯಣ ಭಾಗವತರು (85) ಗುರುವಾರ ರಾತ್ರಿ ದ‌.ಕ ಜಿಲ್ಲೆಯ ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ‌ನಿಧನರಾಗಿದ್ದಾರೆ.

ಮಾರ್ಚ್ 13, 1938 ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತಿ ದಂಪತಿಗಳ ಮಗನಾಗಿ ಜನಿಸಿದ ಬಲಿಪ ನಾರಾಯಣ ಭಾಗವತರು ಕೇವಲ 13 ವರ್ಷದವರಿದ್ದಾಗ ಯಕ್ಷಗಾನಕ್ಕೆ ಸೇರಿದರು.

ಬಲಿಪ ಅವರ ಅಜ್ಜ ಬಲಿಪ ನಾರಾಯಣ ಭಾಗವತರು ಸಹ ಪ್ರಸಿದ್ಧ ಭಾಗವತರಾಗಿದ್ದರು, ಅವರು ಬಲಿಪ ಶೈಲಿಯ ಗಾಯನವನ್ನು ಮೊದಲು ಜನಪ್ರಿಯಗೊಳಿಸಿದರು. ಅವರ ಮೊಮ್ಮಗ ಬಲಿಪ ನಾರಾಯಣ ಭಾಗವತರು ಬಲಿಪ ಶೈಲಿಯ ಗಾಯನವನ್ನು ಮುಂದುವರಿಸಿದರು. ಅವರ ಇಬ್ಬರು ಪುತ್ರರಾದ ಶಿವಶಂಕರ ಬಲಿಪ ಮತ್ತು ಪ್ರಸಾದ್ ಬಲಿಪ ಇಂದಿಗೂ ಅದೇ ಬಲಿಪ ಶೈಲಿಯಲ್ಲಿ ಹಾಡುತ್ತಾರೆ.

ಅವರು 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ಹೊಂದಿದ್ದಾರೆ. ಸುಮಾರು 60 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ತೆಂಕುತಿಟ್ಟು ಶೈಲಿಯ ಯಕ್ಷಗಾನದ ಭೀಷ್ಮ ಎಂದು ಗುರುತಿಸಲ್ಪಟ್ಟರು. ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರ ಅಭಿಮಾನಿಗಳು 'ಬಲಿಪ ಅಮೃತ ಭವನ'ವನ್ನು ನಿರ್ಮಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ಪ್ರಶಸ್ತಿ, ಶೇಣಿ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ನುಡಿ ಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.