ಮುಂಬರುವ ರಾಜ್ಯ ಬಜೆಟ್, ಬೊಮ್ಮಾಯಿ ಬಚಾವ್ ಬಜೆಟ್ - ಪ್ರಿಯಾಂಕ ಖರ್ಗೆ ವ್ಯಂಗ್ಯ

ಮುಂಬರುವ ರಾಜ್ಯ ಬಜೆಟ್, ಬೊಮ್ಮಾಯಿ ಬಚಾವ್ ಬಜೆಟ್ - ಪ್ರಿಯಾಂಕ ಖರ್ಗೆ ವ್ಯಂಗ್ಯ

ಲಬುರ್ಗಿ: ನನಗೆ ಮುಂಬರುವ ರಾಜ್ಯ ಬಜೆಟ್ ಮೇಲೆ ಭರವಸೆಗಳಿಲ್ಲ. ಈ ಬಜೆಟ್ ಕೇವಲ ಬಿಜೆಪಿ ಬಚಾವ್, ಬೊಮ್ಮಾಯಿ ಬಚಾವ್ ಬಜೆಟ್ ಆಗಿರುತ್ತದೆಯೇ ವಿನಃ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಕಲಬುರ್ಗಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ನಿನ್ನೆ ಮಂಡಿಸಿದ ಬಜೆಟ್ ಅನ್ನು ಅತ್ಯುತ್ತಮ ಬಜೆಟ್, ಇದರಿಂದ ದೇಶಕ್ಕೆ ಒಳ್ಳೆಯದಾಗಲಿದೆ. ಆಮೂಲಕ ಅಮೃತ ಕಾಲಕ್ಕೆ ನಾವು ಕಾಲಿಡುತ್ತಿದ್ದೇವೆ. ಭಾರತ ಮುಂದಿನ 25 ವರ್ಷಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಈ ಬಜೆಟ್ ನೀಲಿನಕ್ಷೆಯಾಗಿದೆ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ. ಆಮೂಲಕ ಕಳೆದ ಎಂಟುವರ್ಷಗಳಿಂದ ಇವರ ಸಾಧ್ಯನೆ ಶೂನ್ಯ ಎಂದು ಹೇಳಿದ್ದಾರೆ.

ಈ ಬಜೆಟ್ ಅನ್ನು ಅವಲೋಕಿಸಿದರೆ, ಕಾರ್ಮಿಕ, ರೈತ, ಬಡವ, ಮಹಿಳೆ, ಅಲ್ಪಸಂಖ್ಯಾತರು, ದಲಿತರ ವಿರೋಧಿ ಬಜೆಟ್ ಆಗಿದೆ. ನಿನ್ನೆ ವಿತ್ತ ಸಚಿವರ ಭಾಷಣ ಗಮನಿಸಿದರೆ, ಅವರು ಕಾರ್ಮಿಕರ ಬಗ್ಗೆ ಮಾತೇ ಆಡಿಲ್ಲ. ಕಾರ್ಮಿಕ ಇಲಾಖೆಗೆ ಬಜೆಟ್ ನ ಶೇ.0.1ರಷ್ಟು ಅನುದಾನ ನೀಡಿದ್ದಾರೆ. ನೌಕರರ ಪಿಂಚಣಿ ಯೋಜನೆ ಕಳೆದ ವರ್ಷ 18,478 ಕೋಟಿ ಇತ್ತು. ಈ ವರ್ಷ 9160 ಅನುದಾನ ನೀಡಲಾಗಿದೆ. ಇದು ಕಾರ್ಮಿಕ ಪರವಾದ ಬಜೆಟ್ ಎಂದು ಹೇಳಲು ಸಾಧ್ಯವೇ? ನಾವು ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನಭಾಗ್ಯ ಯೋಜನೆ ಮಾಡುತ್ತೇವೆ ಎಂದಾಗ ಬಿಜೆಪಿ ನಾಯಕರು ನಕ್ಕಿದ್ದರು ಎಂದರು.

ಕೋವಿಡ್ ಸಮಯದಲ್ಲಿ ಇವರು ಜನಕಲ್ಯಾಣ ಯೋಜನೆಯನ್ನು ಹಸಿವುಮುಕ್ತ ಭಾರತ ಎಂಬ ಉದ್ದೇಶದಿಂದ ಆರಂಭಿಸಿದರು. ಇವರು ಆಹಾರ ಸಬ್ಸಿಡಿಗೆ ಕಳೆದ ವರ್ಷ 2.88 ಲಕ್ಷ ಕೋಟಿ ನೀಡಿದ್ದರು. ಇವರ ಆರ್ಥಇಕ ನೀತಿಯಿಂದ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದು, ಈ ವರ್ಷ 1.97 ಲಕ್ಷ ಕೋಟಿ ಇಟ್ಟಿದ್ದಾರೆ. ಆಮೂಲಕ 71691 ಕೋಟಿ ಅನುದಾನ ಕಡಿಮೆ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಾದ ನರೇಗಾ ಕೋವಿಡ್ ಸಂದರ್ಭದಲ್ಲಿ ಕಾಮಧೇನುವಾಗಿ ಬಹಳ ಜನರಿಗೆ ಆಸರೆಯಾಗಿತ್ತು. ಮೋದಿ ಅವರು ಈ ಯೋಜನೆಯನ್ನು ಯುಪಿಎ ಸರ್ಕಾರದ ವೈಫಲ್ಯದ ಸ್ಮಾರಕ ಎಂದಿದ್ದರು ಎಂದು ಹೇಳಿದರು.

ಗ್ರಾಮೀಣ ಮಟ್ಟದ ಬಡವರಿಗೆ ಆಶ್ರಯ ಯೋಜನೆಗೆ ಕಳೆದ ವರ್ಷ 98468 ಕೋಟಿ ನೀಡಿದ್ದರು. ಈ ವರ್ಷ ಕೇವಲ 60 ಸಾವಿರ ಕೋಟಿ ನೀಡಿದ್ದಾರೆ. 38468 ಕೋಟಿ ಕಡಿಮೆ ಮಾಡಿದ್ದಾರೆ. ಇವರು ಮಾತೆತ್ತಿದರೆ ರೈತರ ಪರವಾಗಿದ್ದೇವೆ ಎಂದು ಹೇಳುತ್ತಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದವರು, ರಸಗೊಬ್ಬರ ಸಬ್ಸಿಡಿ ಅನುದಾನ ಕಡಿತ ಮಾಡಿದ್ದಾರೆ. ಕಳೆದ ವರ್ಷ 2.25 ಲಕ್ಷ ಕೋಟಿ ಅನುದಾನ ನೀಡಿದ್ದ ಸರ್ಕಾರ 1.75 ಲಕ್ಷ ಕೋಟಿ ಆಗಿದೆ. ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಗಗನ ಮುಟ್ಟಿದೆ. ಪೆಟ್ರೋಲ್ ಸಬ್ಸಿಡಿಗೆ ಸರ್ಕಾರ ಕೇವಲ 2 ಸಾವಿರ ಕೋಟಿ ನೀಡಿದ್ದಾರೆ. ಇಂತಹ ನಿರ್ಧಾರದ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ತೆರಿಗೆ ವಿನಾಯಿತಿ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಬಹುತೇಕರಿಗೆ ಹೊಸ ಮತ್ತು ಹಳೇ ತರಿಗೆ ಪದ್ಧತಿ ಬಗ್ಗೆ ಗೊತ್ತೇ ಇಲ್ಲ. ಜನರ ಆದಾಯವೇ ಕುಸಿದಿದೆ. ಅದರ ಬಗ್ಗೆ ಸರ್ಕಾರ ಚರ್ಚೆಯನ್ನೇ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಮಧ್ಯಮವರ್ಗವೇ ಇಲ್ಲ. ಈ ಸರ್ಕಾರ ಮಧ್ಯಮ ವರ್ಗದವರನ್ನು ನಾಶ ಮಾಡಿದೆ. ದೇಶದ 25 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ ಎಂದು ಇವರ ವರದಿಯಲ್ಲೇ ಬಂದಿದೆ. ಈ ಬಗ್ಗೆ ಇವರು ಚಕಾರ ಇಲ್ಲ. ದೇಶದ ಜನರಿಗೆ ಸೂರು ನೀಡುವುದಾಗಿ ಹೇಳಿದ್ದ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಪಿಎಂ ಆವಾಸ್ ಯೋಜನೆಗೆ ಶೇ.11ರಷ್ಟು ಕಡಿತ ಮಾಡಿದೆ. ಕಳೆದ ವರ್ಷ 90 ಸಾವಿರ ಕೋಟಿ ಇದ್ದ ಅನುದಾನ ಈ ವರ್ಷ 79 ಸಾವಿರ ಕೋಟಿ ನೀಡಿದೆ. ಇವರು ಬಡವರ ಪರವಾಗಿದ್ದಾರಾ? ಎಂದು ಕೇಳಿದರು.

ಅಡುಗೆ ಅನಿಲ ಬೆಲೆ 1000 ದಾಟಿದೆ. 2021ರಲ್ಲಿ ಎಲ್ ಪಿಜಿ ಸಬ್ಸಿಡಿಗೆ 37 ಸಾವಿರ ಕೋಟಿ ನೀಡಿತ್ತು ಎಂದು ಬಿಜೆಪಿಯವರ ಗಮನಕಕ್ಕೆ ತರಲು ಬಯಸುತ್ತೇನೆ. ಈ ವರ್ಷ ಕೇವಲ 2250 ಕೋಟಿ ನೀಡಿದ್ದಾರೆ. ಬಿಜೆಪಿಯವರು ಬಜೆಟ್ ಪುಸ್ತಕ ಓದಬೇಕು. 35 ಸಾವಿರ ಅನುದಾನ ಏನಾಯ್ತು? ಉಜ್ವಲ ಯೋಜನೆ ಏನಾಯ್ತು? ಇನ್ನು ಪಿಎಂ ಕಿಸಾನ್ ಯೋಜನೆಗೆ 8 ಸಾವಿರ ಕೋಟಿ ಕಡಿತವಾಗಿದೆ. ಈ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಆರ್ಥಿಕ ಅಸಮಾನತೆ ನಿವಾರಣೆ ಮಾಡಲು ಕ್ರಮವಿಲ್ಲ. ಬೆಲೆ ಏರಿಕೆ ನಿಯಂತ್ರಣದ ಬಗ್ಗೆ ಪ್ರಸ್ತಾಪವಿಲ್ಲ ಎಂದರು.

ಕೇಂದ್ರದ ಬಜೆಟ್ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ಬರೀ ಬಾಯಲ್ಲಿ ಹೇಳುತ್ತಿದೆ. ಸ್ಕಿಲ್ ಇಂಡಿಯಾ, ಮೇಕ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಬಚಾವ್ ಬೇಟಿ ಪಡಾವ್, ಪಿಎಂ ಆವಾಸ್ ಯಾವ ಯೋಜನೆಯೂ ಪೂರ್ಣಗೊಂಡಿಲ್ಲ. ಆದರೂ ಕಳೆದ 75 ವರ್ಷಗಳಲ್ಲಿ ಮಾಡಲಾಗದ್ದನ್ನು ನಾವು ಮಾಡಿದ್ದೇವೆ ಎನ್ನುತ್ತಾರೆ ಎಂದರು.

ಮಾಧ್ಯಮಗಳಲ್ಲಿ ರಾಜ್ಯ ಬಿಜೆಪಿ ನಾಯಕರು ಬಹಳ ಮಾತನಾಡುತ್ತಿದ್ದಾರೆ. ಮೋದಿ, ನಿರ್ಮಲಾ ಸೀತಾರಮನ್ ಅವರನ್ನು ಇಂದ್ರ ಚಂದ್ರ ಎಂದು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ. ಕೇಂದ್ರದಲ್ಲಿ ಯುಪಿಎ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ನೋಡಿದ್ದೇವೆ. ಮೋದಿ ಅವರ ಸರ್ಕಾರ ನುಡಿದಂತೆ ನಡೆಯುತ್ತದೆ. ಕೊಟ್ಟಿರುವ ಭರವಸೆ ಈಡೇರಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.

ನಾವು ದಿನನಿತ್ಯ ಬಿಜೆಪಿಯವರಿಗೆ ಅವರು ಕೊಟ್ಟ ಯೋಜನೆಗಳ ಬಗ್ಗೆ ನಿಮ್ಮ ಬಳಿ ಇದೆಯಾ ಉತ್ತರ ಎಂಬ ಅಭಿಯಾನದ ಮೂಲಕ ಪ್ರಶ್ನೆ ಕೇಳುತ್ತಲೇ ಇದ್ದೇವೆ. ಇದುವರೆಗೂ ಯಾವುದಕ್ಕೂ ಉತ್ತರ ನೀಡಿಲ್ಲ. 2013ರಲ್ಲಿ ನಮ್ಮ ಪಕ್ಷ 165 ಭರವಸೆಗಳನ್ನು ನೀಡಿದ್ದು, 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿಯವರು ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದ್ದಾರೆ. ಬಿಜೆಪಿಯವರು 2018ರಲ್ಲಿ ಕೊಟ್ಟ ಭರವಸೆ ನೋಡಿದರೆ ಬಿಜೆಪಿ ಎಂದರೆ ಬಂಡಲ್ ಜನತಾ ಪಕ್ಷ ಎಂದು ಸಾಬೀತಾಗುತ್ತದೆ. ಬಿಜೆಪಿ ತಾನು ಕೊಟ್ಟ 600 ಭರವಸೆಗಳಲ್ಲಿ ಶೇ.10ರಷ್ಟು ಈಡೇರಿಸಲು ಇವರಿಗೆ ಸಾಧ್ಯವಾಗಿಲ್ಲ. ಇದು ಅವರ ಯೋಗ್ಯತೆ ಎಂದು ಕಿಡಿಕಾರಿದರು.

ಬಿಜೆಪಿಯವರ ವರದಿಯಲ್ಲಿ ತಿಳಿಸಿರುವಂತೆ ಅವರು ಈಡೇರಿಸಿರುವುದು ಕೇವಲ 51 ಭರವಸೆಗಳು ಮಾತ್ರ. ನಮ್ಮ ಪ್ರಕಾರ ಅದೂ ಆಗಿಲ್ಲ. ಕೃಷಿ ಮತ್ತು ರೈತರಿಗೆ ಕೊಟ್ಟ 112 ಭರವಸೆಗಳಲ್ಲಿ ಕೇವಲ 15 ಭರವಸೆ ಈಡೇರಿಸಿದ್ದಾರೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಡಬಲ್ ಇಂಜಿನ್ ಸರ್ಕಾರದಲ್ಲಿ ಆದಾಯ ಡಬಲ್ ಎಂದರು. ಅದೂ ಆಗಿಲ್ಲ ಎಂದರು.

ಇನ್ನು ಮಹಿಳೆಯರ ಸಬಲೀಕರಣಕ್ಕೆ ಕೊಟ್ಟ 26 ಭರವಸೆ ನೀಡಿ, 2 ಭರವಸೆ ಮಾತ್ರ ಈಡೇರಿಸಿದ್ದಾರೆ. ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 1 ಭರವಸೆ ಮಾತ್ರ ಈಡೇರಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ವಿಭಾಗ ಮಾಡಿ ಅದರಲ್ಲಿ 81 ಭರವಸೆ ನೀಡಿದ್ದು, 4 ಮಾತ್ರ ಈಡೇರಿಸಿದ್ದಾರೆ. ಆಡಳಿತ ಮತ್ತು ಸುರಕ್ಷತೆ ವಿಚಾರವಾಗಿ 32 ಭರವಸೆ ನೀಡಿ, 4 ಈಡೇರಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ 32 ಭರವಸೆ ನೀಡಿ ಕೇವಲ 3 ಈಡೇರಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ 40 ಭರವಸೆ ನೀಡಿ ಕೇವಲ 5 ಈಡೇರಿಸಿದ್ದಾರೆ. ಮೂಲಭೂತ ಸೌಕರ್ಯ ವಿಚಾರವಾಗಿ ಕೊಟ್ಟ ಭರವಸೆ 48, ಮಾಡಿದ್ದು 8. ಆರ್ಥಿಕ ಮತ್ತು ಕೈಗಾರಿಕೆ ವಿಚಾರದಲ್ಲಿ 23 ಭರವಸೆ ನೀಡಿ, 1 ಮಾತ್ರ ಈಡೇರಿಸಿದ್ದಾರೆ. ಸಂಸ್ಕೃತಿ ಮತ್ತು ಪರಂಪರೆ ವಿಚಾರದಲ್ಲಿ ನೀಡಿದ್ದು 87 ಭರವಸೆ ನೀಡಿ, ಮಾಡಿದ್ದು ಕೇವಲ 4 ಮಾತ್ರ. ಇನ್ನು ಪ್ರಾದೇಶಿಕವಾಗಿ ಕೊಟ್ಟ 12 ಭರವಸೆಗಳಲ್ಲಿ ಮಾಡಿರುವುದು ಶೂನ್ಯ. ಇನ್ನು ಪರಿಸರ ವಿಚಾರದಲ್ಲಿ 14 ಭರವಸೆ ನೀಡಿ 1 ಈಡೇರಿಸಿದ್ದಾರೆ. ನವ ಬೆಂಗಳೂರು ನಿರ್ಮಾಣಕ್ಕಾಗಿ ಕೊಟ್ಟ 69 ಭರವಸೆಗಳಲ್ಲಿ 5 ಮಾತ್ರ ಈಡೇರಿಸಿದ್ದಾರೆ.

ಇಷ್ಟಾದರೂ ಬಿಜೆಪಿಯವರು ಮಾಧ್ಯಮಗಳಲ್ಲಿ ರಾಜಾರೋಷವಾಗಿ ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರವಾಗಿ ನಾನು ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯ ಯೋಜನಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನಾದರೂ ಕಳುಹಿಸಿದ್ದಾರಾ ಎಂಬ ಪ್ರಶ್ನೆ ಕೇಳಿದ್ದೆ. ಪಶುಸಂಗೋಪನೆ ಇಲಾಖೆ ವ್ಯಾಪ್ತಿಯಲ್ಲಿ ಕಾಮಧೇನು ಅನುದಾನ ಯೋಜನೆ ಇದೆಯೇ? ಇದ್ದರೆ 3 ಸಾವಿರ ಕೋಟಿ ನೀಡುವ ಪ್ರಸ್ತಾಪವಿದೆಯೇ ಎಂದು ಕೇಳಿದಾಗ, ಅವರು ಕೊಟ್ಟ ಉತ್ತರದಲ್ಲಿ, ಕಾಮಧೇನು ಯೋಜನೆ ಹಾಗೂ ಅದರಲ್ಲಿ 3 ಸಾವಿರ ಕೋಟಿ ನೀಡುವ ಯಾವುದೇ ಯೋಜನೆ ಅನುಷ್ಠಾನಗೊಂಡಿಲ್ಲ ಎಂದು ಉತ್ತರ ನೀಡಿದ್ದಾರೆ.

ಈ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದ ಮೇಲೆ ಪುಣ್ಯಕೋಟಿ ದತ್ತು ಯೋಜನೆ ಮೂಲಕ ಸರ್ಕಾರಿ ಸಿಬ್ಬಂದಿಗಳಿಂದ 40 ಕೋಟಿ ವಸೂಲಿ ಮಾಡಿದ್ದಾರೆ. ಒಬ್ಬ ಬಿಜೆಪಿ ನಾಯಕ ಗೋವುಗಳನ್ನು ದತ್ತು ತೆಗೆದುಕೊಂಡಿಲ್ಲ. ಆದರೂ ಇವರು ಅಧಿವೇಶನದಲ್ಲಿ ಕೇಸರಿ ಶಾಲು ಹಾಕಿಕೊಂಡು ಟೇಬಲ್ ಕುಟ್ಟಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರು.

ಇನ್ನು ಮತ್ತೊಂದು ಪ್ರಶ್ನೆಯಲ್ಲಿ ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ ಯೋಜನೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 3ರಂತೆ, ತಾಲೂಕು ಕೇಂದ್ರಗಳಲ್ಲಿ ತಲಾ 1ರಂತೆ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆಯೇ ಎಂದು ಕೇಳಿದಾಗ, ಅದಕ್ಕೆ ಸರ್ಕಾರ ಕೊಟ್ಟ ಉತ್ತರದಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಈ ಯೋಜನೆ ಮುಂದುವರಿದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕೇವಲ ಬೊಗಳೆ ಮಾತು ಕೊಟ್ಟು ಬಿಜೆಪಿ ಭರವಸೆ ಎಂಬ ಪ್ರಚಾರವನ್ನು ಮಾಡುತ್ತಿದ್ದಾರೆ. ಇನ್ನು ರಾಜ್ಯ ಬಜೆಟ್ ಸಮೀಪಿಸುತ್ತಿದ್ದು, ಇದರಲ್ಲಿ ಕಳೆದ ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಕೂಡ ಇವರಿಂದ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇವರು ಕಳೆದ ಬಜೆಟ್ ನಲ್ಲಿ ಕೇವಲ ಶೇ.53ರಷ್ಟು ಕಾರ್ಯಕ್ರಮ ಮಾತ್ರ ಜಾರಿಗೊಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ಕಾಂಗ್ರೆಸ್ ವರದಿಯಲ್ಲ. ಮುಖ್ಯಮಂತ್ರಿಗಳ ಸಭೆಯ ವರದಿಯಾಗಿದೆ. ಇದರಲ್ಲಿ ಬೊಮ್ಮಾಯಿ ಅವರು 2.65 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ 391 ಘೋಷಣೆಗಳನ್ನು ಮಾಡಿದ್ದು, ಆ ಪೈಕಿ 52 ನೀತಿಗಳ ಘೋಷಣೆಯಾಗಿದ್ದು, ಉಳಿದ 339 ಕಾರ್ಯರೂಪ ಯೋಜನಾ ಘೋಷಣೆಗಳಾಗಿವೆ. ಇದರಲ್ಲಿ 207 ಸರ್ಕಾರದ ಆದೇಶವಾಗಿದೆ. ಉಳಿದ 132 ಯೋಜನೆಗಳು ಇನ್ನಷ್ಟೇ ಜಾರಿಯಾಗಬೇಕಿದೆ ಎಂದರು.

ಕೇಂದ್ರ ಬಜೆಟ್ ಆಗಲಿ, ರಾಜ್ಯ ಬಜೆಟ್ ಆಗಲಿ ಎಲ್ಲವೂ ಬಡ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಕನ್ನಡಿಗರ ವಿರೋಧಿ ಬಜೆಟ್ ಆಗಿದೆ. ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿಲ್ಲ ಜನಾದ್ರೋಹ ಜಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ 40% ಕಮಿಷನ್ ಪಡೆಯುವುದರಲ್ಲಿ ಇರುವ ಆಸಕ್ತಿಯಲ್ಲಿ ಅರ್ಧದಷ್ಟು ಕಾರ್ಯಕ್ರಮ ಅನುಷ್ಠಾನಕ್ಕೆ ತರುವುದರಲ್ಲಿ ತೋರಿಸಿದ್ದರೆ ಜನರ ಪ್ರೀತಿಗೆ ಪಾತ್ರರಾಗುತ್ತಿದ್ದಿರಿ. ಬಿಜೆಪಿಯ ವರದಿ, ವಿಶ್ಲೇಷಣಾ ವರದಿಗಳಲ್ಲಿ ಈ ಸರ್ಕಾರ ತಾನು ಕೊಟ್ಟ ಭರವಸೆಗಳಲ್ಲಿ ಶೇ.10ರಷ್ಟು ಭರವಸೆ ಈಡೇರಿಸಿಲ್ಲ ಎಂದು ಹೇಳುತ್ತಿಲ್ಲ. ಇಂವರು ಕಾಂಗ್ರೆಸ್ ಬಗ್ಗೆ ಯಾಕೆ ಮಾತನಾಡುತ್ತಾರೆ. ಇವರು ಟೀಕೆ ಮಾಡುವುದನ್ನು ಬಿಟ್ಟು ತಮ್ಮ ಸಾಧನೆ ಏನು ಎಂದು ಹೇಳಲಿ ಎಂದು ಕೇಳಿದರು.

ಬಿಜೆಪಿಯವರು ಪ್ರಧಾನಿ ಮೋದಿ, ಜೆ.ಪಿ ನಡ್ಡಾ ಸೇರಿದಂತೆ ಯಾರನ್ನೇ ಕರೆಸಿ ವಿಯಜ ಸಂಕಲ್ಪ ಯಾತ್ರೆ ಮಾಡಿದರೂ ಅದು ಕನಸಾಗಿಯೇ ಉಳಿಯುತ್ತದೆಯೇ ಹೊರತು ನನಸಾಗುವುದಿಲ್ಲ. ಡಬಲ್ ಇಂಜಿನ ಸರ್ಕಾರದ ಡಬಲ್ ದೋಖಾ ಬಗ್ಗೆ ಕನ್ನಡಿಗರು ಎಚ್ಛೆತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನ ಬಂಡಲ್ ಜನತಾ ಪಕ್ಷಕ್ಕೆ ಪಾಠ ಕಲಿಸಿ ಮನೆಗೆ ಕಳಿಸುವ ಅಭಿಯಾನವನ್ನು ಜನ ಆಗಲೇ ಆರಂಭಿಸಿದ್ದಾರೆ. ಜನ 40% ಕಮಿಷನ್, ಸುಳ್ಲು ಭರವಸೆ, ನಿಮ್ಮ ಆಡಳಿತ ವೈಖರಿ, ಯುಪಿ ಮಾದರಿ ಅಭಿವೃದ್ಧಿ ಎಲ್ಲದರಿಂದ ಬೇಸತ್ತು ಹೋಗಿದ್ದಾರೆ. ನಮಗೆ ಯುಪಿ ಮಾಡೆಲ್ ಬೇಡ. ಯುಪಿಯವರು ಇಲ್ಲಿಗೆ ಉದ್ಯೋಗ ಹರಸಿ ಬರುತ್ತಾರೆಯೇ ಹೊರತು, ಕನ್ನಡಿಗರು ಉದ್ಯೋಗ ಹರಸಿ ಯುಪಿಗೆ ಹೋಗುವುದಿಲ್ಲ ಎಂದರು.

ಹೀಗಾಗಿ ನನಗೆ ಮುಂಬರುವ ರಾಜ್ಯ ಬಜೆಟ್ ಮೇಲೆ ಭರವಸೆಗಳಿಲ್ಲ. ಈ ಬಜೆಟ್ ಕೇವಲ ಬಿಜೆಪಿ ಬಚಾವ್, ಬೊಮ್ಮಾಯಿ ಬಚಾವ್ ಬಜೆಟ್ ಆಗಿರುತ್ತದೆಯೇ ವಿನಃ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದು ತಿಳಿಸಿದರು.