ಬ್ರಾಹ್ಮಣರ ಮೇಲೆ ಬಿಜೆಪಿ ಚಿತ್ತ: ಮತಕ್ಕೆ ಬಲೆ ಹಾಕಲು ಸಮಿತಿ ರಚನೆ

ಲಕ್ನೋ, ಡಿಸೆಂಬರ್ 27: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯ ಮಾಡುತ್ತಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮತದ ಮೇಲೆ ಬಿಜೆಪಿ ಚಿತ್ತ ನೆಟ್ಟಿದೆ. ಬ್ರಾಹ್ಮಣ ಸಮುದಾಯದ ಮತಕ್ಕೆ ಬಲೆ ಹಾಕಲೆಂದೇ ಬಿಜೆಪಿ ಸಮಿತಿಯನ್ನು ರಚನೆ ಮಾಡಲು ಮುಂದಾಗಿದೆ.
403 ವಿಧಾನಸಭೆ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಬ್ರಾಹ್ಮಣರ ಮತವನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಬ್ರಾಹ್ಮಣರಿಗಾಗಿಯೇ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಸಮತಿಯನ್ನು ರಚನೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಈ ಸಮಿತಿಯಲ್ಲಿ ಮಾಜಿ ಕೇಂದ್ರ ಸಚಿವ ಶಿವ ಪ್ರತಾಪ್ ಶುಕ್ಲಾ ಹಾಗೂ ಮಹೇಶ್ ಶರ್ಮಾ, ಬಿಜೆಪಿ ನಾಯಕರುಗಳಾದ ಅಭಿಜಿತ್ ಮಿಶ್ರಾ ಹಾಗೂ ಮಾಜಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಬಾಯ್ ಮುಖರಿಯಾ ಇದ್ದಾರೆ.
ಉತ್ತರ ಪ್ರದೇಶದ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಬ್ರಾಹ್ಮಣರ ಸಮಿತಿಯನ್ನು ರಚನೆ ಮಾಡುವ ನಿರ್ಧಾರವನ್ನು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯದ ಮುಖಂಡರು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಾ ಇದ್ದರು. ಸಚಿವ ಧರ್ಮೇಂದ್ರ ಪ್ರಧಾನ್ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಉಸ್ತುವಾರಿ ಆಗಿದ್ದಾರೆ.
ಎಲ್ಲಾ ಸಮುದಾಯಕ್ಕಾಗಿ ಬಿಜೆಪಿಯ ಪ್ರತ್ಯೇಕ ಕಾರ್ಯಕ್ರಮಮೂಲಗಳ ಪ್ರಕಾರ ಬಿಜೆಪಿಯು ಎಲ್ಲಾ ಸಮುದಾಯದ ಮೇಲೆ ಕಣ್ಣಿಟ್ಟು ಪ್ರತ್ಯೇಕ ಪ್ರತ್ಯೇಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಎಲ್ಲಾ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಬಿಜೆಪಿಯು ಆಯೋಜನೆ ಮಾಡುತ್ತಿದೆ. "ಬಿಜೆಪಿಯು ಯಾವಾಗಲೂ ಎಲ್ಲಾ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ," ಎಂದು ಈ ಸಭೆಯಲ್ಲಿ ಹಾಜರಿದ್ದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು ಈಗಾಗಲೇ ಬ್ರಾಹ್ಮಣ ಸಮುದಾಯ ಮಾತ್ರವಲ್ಲದೇ ಮುಸ್ಲಿಂ ಸಮುದಾಯದಲ್ಲಿನ ಕೆಳವರ್ಗದ ಜನರ ಮೇಲೆಯೂ ಬಿಜೆಪಿಯು ಚಿತ್ತ ಇರಿಸಿದೆ. ಈ ಸಮುದಾಯಕ್ಕಾಗಿಯೇ ಹಲವಾರು ಕಾರ್ಯ ಯೋಜನೆಯನ್ನು ರೂಪಿಸಿದೆ.
ಯುಪಿಯ ಶೇ. 17 ರಷ್ಟು ಮತ ಬ್ರಾಹ್ಮಣರ ಪಾಲು!
ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮತಕ್ಕಾಗಿ ಬಿಜೆಪಿ ಮಾತ್ರವಲ್ಲ ಎಲ್ಲಾ ಪಕ್ಷಗಳು ಬಲೆ ಬೀಸಿದೆ. ಇದಕ್ಕೆ ಮುಖ್ಯ ಕಾರಣ ಉತ್ತರಪ್ರದೇಶದಲ್ಲಿ, ಬ್ರಾಹ್ಮಣರು ರಾಜ್ಯದ ಜನಸಂಖ್ಯೆಯ ಶೇಕಡ 10-12 ರ ನಡುವೆ ಇದ್ದಾರೆ. ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮತ ಶೇಕಡ 17 ಕ್ಕಿಂತಲೂ ಅಧಿಕ ಇದೆ. ಈ ಸಮುದಾಯವು ಉತ್ತರ ಪ್ರದೇಶದ ಚುನಾವಣೆಯ ಮೇಲೆ ಭಾರೀ ಪ್ರಭಾವವನ್ನು ಬೀರುತ್ತದೆ. ಇನ್ನು ಇತ್ತೀಚೆಗೆ ಹಲವಾರು ಬ್ರಾಹ್ಮಣ ನಾಯಕರು ಪೂರ್ವಾಚಲದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಖ್ಯವಾಗಿ ಈ ಹಿಂದೆ ಬಹುಜನ ಸಮಾಜ ಪಕ್ಷದಲ್ಲಿ ಇದ್ದ ಬ್ರಾಹ್ಮಣ ನಾಯಕರು ಈಗ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಇನ್ನು ಈ ಹಿಂದೆ ಮಾತನಾಡಿದ್ದ ಅಖಿಲ ಭಾರತೀಯ ಬ್ರಾಹ್ಮಣ ಸಂಘಟನೆ ಮಹಾಸಂಘದ ಅಧ್ಯಕ್ಷ ಅಸೀಮ್ ಪಾಂಡೆ, "ಬ್ರಾಹ್ಮಣರು ಯುಪಿಯಲ್ಲಿ ಜನರನ್ನು ಅಧಿಕಾರಕ್ಕೆ ತರುತ್ತಾರೆ. ಆ ಅಧಿಕಾರದಿಂದ ಕೆಳಗೆ ಕೂಡಾ ಇಳಿಸುತ್ತಾರೆ. ಇದು ರಾಜ್ಯದ ರಾಜಕೀಯ ಇತಿಹಾಸವಾಗಿದೆ," ಎಂದು ಹೇಳಿದ್ದಾರೆ. 2017 ರ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬ್ರಾಹ್ಮಣ ಸಮುದಾಯ
ದೆಹಲಿ ಮೂಲದ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿಗಳು (ಸಿಎಸ್ಡಿಎಸ್) ನಡೆಸಿದ ವಿವಿಧ ಅಧ್ಯಯನಗಳು 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬ್ರಾಹ್ಮಣ ಮತಗಳೆಂದು ಸೂಚಿಸುತ್ತದೆ. ಸಿಎಸ್ಡಿಎಸ್ ಪ್ರಕಾರ, ಹಿಂದಿನ 2007 ಮತ್ತು 2012 ರ ವಿಧಾನಸಭಾ ಚುನಾವಣೆಗಳಲ್ಲಿ, 40 ಮತ್ತು 38 ಪ್ರತಿಶತ ಬ್ರಾಹ್ಮಣರು ಕ್ರಮವಾಗಿ ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ 2017 ರಲ್ಲಿ ಸಮುದಾಯದ ಶೇಕಡ 80 ರಷ್ಟು ಮತಗಳು ಬಿಜೆಪಿ ಪಕ್ಷಕ್ಕೆ ಹೋಗಿದ್ದವು. "ಉದ್ವಿಗ್ನತೆಯ ಹೊರತಾಗಿಯೂ, ವಿರೋಧ ಪಕ್ಷವು ಬ್ರಾಹ್ಮಣರನ್ನು ಬಿಜೆಪಿಯಿಂದ ದೂರ ಮಾಡುವುದು ಕಷ್ಟ," ಎಂದು ಕೆಲವು ಬ್ರಾಹ್ಮಣ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣರ ಮತದ ಮೇಲೆ ವಿಪಕ್ಷಗಳದ್ದು ಕಣ್ಣಿದೆ. ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಬಿಜೆಪಿ ರಾಜಕೀಯದಲ್ಲಿ ಬ್ರಾಹ್ಮಣ ಸಮುದಾಯದ ಪ್ರಭಾವ ಕಡಿಮೆಯಾಗುತ್ತಿದೆ ಹಾಗೂ 2020 ರಲ್ಲಿ ದರೋಡೆಕೋರ ವಿಕಾಸ್ ದುಬೆ ಪ್ರಕರಣಗಳು ಬ್ರಾಹ್ಮಣ ಸಮುದಾಯವು ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಿದೆ. ಬ್ರಾಹ್ಮಣರಿಗೆ ಆಡಳಿತಾರೂಢ ಬಿಜೆಪಿಯ ಮೇಲೆ ಇರುವ ಅಸಮಾಧಾನಗಳನ್ನು ಬಳಸಿಕೊಳ್ಳಲು ವಿರೋಧ ಪಕ್ಷಗಳು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಬ್ರಾಹ್ಮಣ ವಿರೋಧಿ ಸರ್ಕಾರವೆಂದು ಸಮುದಾಯದಲ್ಲಿ ಆಕ್ರೋಶ ಎದ್ದಿರುವಾಗ ಯೋಗಿ ಸರ್ಕಾರವನ್ನು ಬ್ರಾಹ್ಮಣ ವಿರೋಧಿ ಎಂದು ಬಿಂಬಿಸಲು ಪಕ್ಷಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಬಿಎಸ್ಪಿ, ಸಮಾಜವಾದಿ ಪಕ್ಷ, ಕಾಂಗ್ರೆಸ್ ಎಲ್ಲವೂ ಬ್ರಾಹ್ಮಣರ ಮತಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.